ಮಂಗಳೂರು, ಡಿ.01 (DaijiworldNews/SM): ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳ ತೆರವಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ನಿರ್ದೇಶನ ನೀಡಿದರು.
ಅವರು ಡಿ.1ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾಖಲಾತಿಗಳ ಪ್ರಕಾರ ಜಿಲ್ಲೆಯಲ್ಲಿ 644 ಕೆರೆಗಳಿವೆ, ಇನ್ನೂ ಹೆಚ್ಚುವರಿ ಕೆರೆಗಳಿದ್ದಲ್ಲಿ ಆರ್ ಟಿಸಿಯನ್ನು ತಪಾಸಣೆ ಮಾಡಿ, ಕೂಲಂಕುಷವಾಗಿ ಪರಿಶೀಲಿಸಿ, ಈ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು, ಒತ್ತುವರಿ ತೆರವುಗೊಂಡಿರುವ ಕೆರೆಗಳ ದಂಡೆಗಳಲ್ಲಿ ಗಿಡಗಳನ್ನು ನೆಡಬೇಕು, ಅವುಗಳ ಸೌಂದರ್ಯಿಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಇದಕ್ಕಾಗಿ ಇದೇ ಡಿ.31ರೊಳಗೆ ಸೂಕ್ತ ಕ್ರಿಯ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಅದರೊಂದಿಗೆ ಕೆರೆಗಳ ನೀರಿನ ಗುಣಮಟ್ಟದ ಬಗ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಮೂಲಕ ಪರಿಶೀಲಿಸಿ ವರದಿ ನೀಡಬೇಕು, ಕೆರೆಗಳಿಗೆ ಮಲಿನ ನೀರು ಸೇರುವ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.
ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಕೆರೆಗಳ ಸರ್ವೆ ಕಾರ್ಯವನ್ನು ಕೈಗೊಳ್ಳಬೇಕು, ಮಂಗಳೂರು ತಾಲೂಕಿನಲ್ಲಿಯೇ 306 ಕೆರೆಗಳಿದ್ದು, 140 ಹೆಚ್ಚುವರಿ ಕೆರೆಗಳಿರುವುದಾಗಿ ತಹಶೀಲ್ದಾರ್ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ, ಈ ಬಗ್ಗೆ ಸರ್ವೆ ನಡೆಸಬೇಕು ಹಾಗೂ ಅವುಗಳನ್ನು ಆರ್ಟಿಸಿ ಮೂಲಕ ಪತ್ತೆ ಮಾಡುವಂತೆ ಅವರು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತ ಗೋಕುಲ್ ದಾಸ್ ಮಾತನಾಡಿ, ಎಲ್ಲಾ ಕೆರೆಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ವಿವರಗಳನ್ನು ನಮೂದಿಸಬೇಕಿದೆ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕೆರೆಗಳ ಹೆಸರು, ಗ್ರಾಮ, ಸರ್ವೆ ನಂ., ಹೋಬಳಿ, ತಾಲೂಕಿನ ವಿವರಗಳನ್ನು ನಮೂನೆಯಲ್ಲಿ ಭರ್ತಿಮಾಡಿ ತಾಲೂಕುವಾರು ಗೂಗಲ್ ಸ್ಪ್ರೆಡ್ ಶೀಟ್ ತಯಾರಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.