ಮಂಗಳೂರು, ಡಿ 01 (DaijiworldNews/MS): ನಕಲಿ ಇಮೇಲ್ ಐಡಿ ಸೃಷ್ಟಿಸಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದ ಉಳಿಯ ರಾಣಿಪುರ ನಿವಾಸಿ ಉಪನ್ಯಾಸಕ ಡೇವಿಡ್ ರಾಕೇಶ್ ಡಿಸೋಜಾ (36) ಎಂಬಾತನನ್ನು ಸೈಬರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನ ಉಪನ್ಯಾಸಕನಾಗಿದ್ದ ರಾಕೇಶ್ ಡಿಸೋಜಾ ನಕಲಿ ಇಮೇಲ್ ಸೃಷ್ಟಿಸಿ ಆ ಮೂಲಕ ಮೆಡಿಕಲ್ ಕಾಲೇಜಿನ ನಿರ್ದೇಶಕರಿಗೆ ಪ್ರಾಂಶುಪಾಲರ ಬಗ್ಗೆ ಆಧಾರ ರಹಿತ ಆರೋಪ ಮಾಡಿ ಇ ಮೇಲ್ ಕಳುಹಿಸಿರುವ ಆರೋಪವಿದೆ. ಈತ ಕಾಲೇಜಿನ ಪ್ರಾಂಶುಪಾಲರ ಹುದ್ದೆಯ ಮೇಲೆ ಕಣ್ಣಿಟ್ಟು ಈ ಕೃತ್ಯ ಎಸಗಿದ್ದ ಎನ್ನಲಾಗಿದೆ
ಪ್ರಾಂಶುಪಾಲರ ವಿರುದ್ಧ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನಾನಾ ವಿಚಾರದಲ್ಲಿ ಆರೋಪ ಹೊರಿಸಿ ಕಾಲೇಜಿನ ನಿರ್ದೇಶಕರಿಗೆ ಇಮೇಲ್ ರವಾನಿಸಿದ್ದ ಎನ್ನಲಾಗಿದೆ. ಕಾಲೇಜು ಆಂತರಿಕ ವಿಚಾರಣೆ ನಡೆಸಿದರೂ ಇಮೇಲ್ ಕಳುಹಿಸಿದವರ ಗುರುತು ಪತ್ತೆಯಾಗಿರಲಿಲ್ಲ.
ನಕಲಿ ಇಮೇಲ್ ಮತ್ತು ನಕಲಿ ಐಡಿ ಆದ ಕಾರಣ ಆರೋಪಿಯ ಪತ್ತೆಯು ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ನಲ್ಲಿ ಕಾಲೇಜಿನ ಪ್ರಾಂಶುಪಾಲರು ಆರೋಪಿಯನ್ನು ಪತ್ತೆ ಹಚ್ಚುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಸೆನ್ ಪೊಲೀಸರು ತಂತ್ರಾಂಶವನ್ನು ಬಳಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದರು. ಇದರಲ್ಲಿ ಡೇವಿಡ್ ಕೈವಾಡವಿರುವುದು ಬೆಳಕಿಗೆ ಬರುತ್ತಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.