ಉಡುಪಿ, ನ 25(SM): ಕೇಂದ್ರ ಸರ್ಕಾರ ಶಬರಿಮಲೆಯ ಇತಿಹಾಸ ಹಾಗೂ ಪರಂಪರೆಯನ್ನು ರಕ್ಷಿಸಲು ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು ಎಂದು ರಾಷ್ಟ್ರೀಯ ಹಿಂದೂ ಆಂದೋಲನಕಾರ ವಿಜಯ ಕುಮಾರ್ ತಿಳಿಸಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪರಂಪರೆ ಕಾಪಾಡಲು ಕಾನೂನು ರೂಪಿಸುವಂತೆ ಹಾಗೂ ಚಿತ್ರ ನಟಿ ಸನ್ನಿ ಲಿಯೋನ್ ಅವರ ವೀರಮ್ಮಾದೇವಿ ಚಲನಚಿತ್ರ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಶನಿವಾರ ಅಜ್ಜರಕಾಡಿನ ಹುತಾತ್ಮ ಸೈನಿಕ ಸ್ಮಾರಕದ ಬಳಿ ಹಮ್ಮಿಕೊಂಡ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.
ಸನಾತಾನ ಧರ್ಮ, ಆಚಾರ–ವಿಚಾರ, ಗ್ರಂಥಗಳ ಮೇಲೆ ನಾಸ್ತಿಕರಿಂದ ನಿರಂತರವಾದ ದೌಜನ್ಯ ನಡೆಯುತ್ತಿದೆ. 12 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶ ನಿಷಿದ್ಧ ಎನ್ನುವ ಪರಂಪರೆ ಇದೆ. ಆದರೆ, ಭಕ್ತರಲ್ಲದ ಕೆಲ ವ್ಯಕ್ತಿಗಳು ದೇಗುಲದ ಧಾರ್ಮಿಕ ನಂಬಿಕೆಗಳನ್ನು ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕೇರಳದ ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಆದೇಶ ಕೊಟ್ಟದ್ದು, ಹಿಂದೂ ಧಾರ್ಮಿಕತೆಗೆ ನೋವುಂಟು ಮಾಡಿದೆ.
ತೃಪ್ತಿ ದೇಸಾಯಿಯಂತಹ ವಿಚಾರವಾದಿ ನಾಸ್ತಿಕರು ದೇಗುಲದ ಒಳಗೆ ಪ್ರವೇಶ ಬಯಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿರುವುದರಿಂದ ಕೋರ್ಟ್ ಮಹಿಳೆಯರಿಗೆ ಪ್ರವೇಶ ಮಾಡುವ ಆದೇಶ ನೀಡಿದೆ. ಇದು ಬಹು ಸಂಖ್ಯಾರಿಗೆ ನೋವು ತಂದಿದ್ದೆ ಎಂದು ವಿಷಾದ ವ್ಯಕ್ತಪಡಿಸಿದರು.