ಕುಂದಾಪುರ, ನ.29 (DaijiworldNews/PY): ಹಲವು ಶತಮಾನಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆ ಬೈಂದೂರು ಸಮೀಪದ ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವವು ನ.28ರ ಭಾನುವಾರ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಂಭ್ರಮದಿಂದ ನಡೆಯಿತು.
60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸುವ ಮೂಲಕ ತಗ್ಗರ್ಸೆ ಕಂಬಳದ ಮೆರುಗು ಮತ್ತಷ್ಟು ಹೆಚ್ಚಿತು. ಕಂಠದಮನೆ ಟಿ. ನಾರಾಯಣ ಹೆಗ್ಡೆಯವರ ಕುಟುಂಬದವರಿಂದ ಸಾಂಪ್ರದಾಯಿಕ ಕಂಬಳ ವರ್ಷಂಪ್ರತಿ ನಡೆಯುತ್ತಿದ್ದು ಈ ಬಾರಿ ‘ಸೆನ್ಸಾರ್’ ಮೂಲಕ ಕೋಣದ ಓಟದ ವೇಗಮಿತಿ ಅಳೆಯುವ ಸಾಧನ ಅಳವಡಿಸಲಾಗಿತ್ತು.
ಸಂಪ್ರದಾಯಕ್ಕೆ ವಿಶೇಷ ಮಾನ್ಯತೆ:
ಕಂಬಳ ಕೇವಲ ಕೋಣಗಳ ಓಟವಲ್ಲ ಇದೊಂದು ರೈತರ ಹಬ್ಬವೆಂಬಂತೆ ಕರಾವಳಿ ಭಾಗದಲ್ಲಿ ಆಚರಿಸಲ್ಪಡುತ್ತದೆ. ಬೈಂದೂರು ವ್ಯಾಪ್ತಿಯಲ್ಲಿ ಅತೀ ದೊಡ್ಡ ಕಂಬಳ ಎಂಬ ಹಿರಿಮೆಗೆ ಪಾತ್ರವಾದ ತಗ್ಗರ್ಸೆ ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ದೈವ, ದೇವರ ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ ಅಲಂಕರಿಸಿದ್ದರು. ಪದ್ಧತಿಯಂತೆ ಊರಿನ ನಿರ್ದಿಷ್ಟ ಕುಟುಂಬವೊಂದರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ. ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಓಡಿಸಿದರೇ, ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಂಡಿದೆ.
ಗಾಂಭೀರ್ಯದಿಂದ ಹೆಜ್ಜೆಯಿಟ್ಟು ಬಂದ ಕಾರಿಕಟ್ಟೆಯ ಕೋಣಗಳು:
ಇಲ್ಲಿನ ಕಾರಿಕಟ್ಟೆ ಮನೆತನದವರ ಕೋಣಗಳು ಪ್ರತಿವರ್ಷ ತಗ್ಗರ್ಸೆ ಕಂಬಳ ಗದ್ದೆಗೆ ವಿಶೇಷ ವೇಷಭೂಷಣ, ವಾದ್ಯ, ಚೆಂಡೆ, ಡೋಲು ವಾದನಗಳ ಜೊತೆ ಹೆಜ್ಜೆ ಹಾಕಿ ಬರುವುದು ರೂಢಿ. ಕಳೆದ 37 ವರ್ಷಗಳಿಂದ ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ನೇತೃತ್ವದಲ್ಲಿ ಮನೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಿ ಕಂಬಳಗದ್ದೆಗೆ ಕೋಣಗಳನ್ನು ಕರೆತರಲಾಯಿತು.
ಕಂಬಳ ಸಮಿತಿ ಪ್ರಮುಖರಾದ ಶಾಂತಾರಾಮ ಶೆಟ್ಟಿ ಬಾರ್ಕೂರು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ವಸಂತ ಹೆಗ್ಡೆ ಕಂಟದಮನೆ, ಟಿ. ಬಾಬು ಶೆಟ್ಟಿ ತಗ್ಗರ್ಸೆ, ಸುಭಾಶ್ಚಂದ್ರ ಶೆಟ್ಟಿ ಕೂರಾಡಿ, ಕರುಣಾಕರ ಹೆಗ್ಡೆ ತಗ್ಗರ್ಸೆ, ಬಾಲಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಕಂಬಳದ ನೇತೃತ್ವ ವಹಿಸಿದ್ದ ಕಂಠದಮನೆ ಟಿ. ನಾರಾಯಣ ಹೆಗ್ಡೆ ಸ್ವಾಗತಿಸಿ, ರತ್ನಾಕರ ಶೆಟ್ಟಿ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು. ಉದಯ ಹೆಗ್ಡೆ ತಗ್ಗರ್ಸೆ, ಅರ್ಜುನ್ ಶೆಟ್ಟಿ ತಗ್ಗರ್ಸೆ ಸಹಕರಿಸಿದರು.