ಮಂಗಳೂರು, ನ24(SS): ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ರಾಮ ಮಂದಿರ ನಿರ್ಮಾಣ ವಿಚಾರದ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಅಡಿಪಾಯ ಹಾಕಿತ್ತು. ಈ ಮೂಲಕ ಜನರಿಗೆ ವಂಚಿಸಿ ಚುನಾವಣೆಯನ್ನು ಗೆದ್ದಿತ್ತು. ಇದೀಗ ಮತ್ತೆ ಮಂದಿರ ನಿರ್ಮಾಣದ ಹೆಸರಲ್ಲಿ ಬಿಜೆಪಿ ಜನರಿಗೆ ವಂಚಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷವು ಕೇವಲ ರಾಮ ಮಂದಿರ ನಿರ್ಮಾಣದ ಹೆಸರಲ್ಲೇ ಸುಮಾರು ಚುನಾವಣೆಗಳನ್ನು ಎದುರಿಸಿದ್ದಾರೆ. ದೇವರ ಹೆಸರು ಹೇಳಿ ಹಣ, ಇಟ್ಟಿಗೆ ಸಂಗ್ರಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ರಾಮ ಮಂದಿರ ಮಾತ್ರ ನಿರ್ಮಾಣ ಆಗಿಯೇ ಇಲ್ಲ ಎಂದು ವ್ಯಂಗ್ಯ ಮಾಡಿದರು.
ಬಿಜೆಪಿ ಪಕ್ಷವು ಪ್ರತಿ ಚುನಾವಣೆ ಬಂದಾಗ ರಾಮ ಮಂದಿರ ನಿರ್ಮಾಣದ ವಿಷಯವನ್ನು ಕೈಗೆತ್ತಿಕೊಳ್ಳುತ್ತಾರೆ. ಇವೆಲ್ಲವನ್ನು ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಮಾಡುತ್ತಿದ್ದಾರೆ ಅನ್ನೋದು ದೇಶದ ಜನತೆಗೆ ಗೊತ್ತಿದೆ ಎಂದು ತಿಳಿಸಿದರು.
ಬಿಜೆಪಿ ಮಾಡುತ್ತಿರುವ ಈ ಎಲ್ಲಾ ನಾಟಕಗಳಿಗೆ 2019 ಚುನಾವಣೆಯಲ್ಲಿ ಜನತೆ ಸರಿಯಾದ ಉತ್ತರ ಕೊಡಲಿದ್ದಾರೆ. ಜನರನ್ನು ಮಂದಿರ ನಿರ್ಮಾಣದ ಹೆಸರು ಹೇಳಿ ಮೋಸಗೊಳಿಸಲು ಸಾಧ್ಯವಿಲ್ಲ ಎಂದರು.