ಮೈಸೂರು, ನ24(SS): ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿಗಿಂತ ಉತ್ತಮ ನಾಯಕರು ದೇಶಕ್ಕೆ ಬೇಕು. ಮುಂದಿನ ಪ್ರಧಾನಿ ಯಾರು ಆಗಬೇಕು ಎನ್ನುವುದು ಈಗ ಅಪ್ರಸ್ತುತ. ಲೋಕಸಭಾ ಚುನಾವಣೆ ಬಳಿಕ ಈ ಬಗ್ಗೆ ಯೋಚಿಸಬಹುದು ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾನ್ ಟಿ.ಎಂ.ಕೃಷ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ, ರಾಹುಲ್ ಗಾಂಧಿಗಿಂತ ಉತ್ತಮ ನಾಯಕರು ದೇಶಕ್ಕೆ ಬೇಕು. ಮುಂದಿನ ಪ್ರಧಾನಿ ಯಾರು ಆಗಬೇಕು ಎನ್ನುವುದು ಈಗ ಅಪ್ರಸ್ತುತ. ಲೋಕಸಭಾ ಚುನಾವಣೆ ಬಳಿಕ ಈ ಬಗ್ಗೆ ಯೋಚಿಸಬಹುದು. ಆದರೆ, ನೇರವಾಗಿ ಮತದಾರರು ಪ್ರಧಾನಿಯನ್ನು ಆಯ್ಕೆ ಮಾಡುವಂತಹ ಅಧ್ಯಕ್ಷೀಯ ಪದ್ಧತಿಯಂತೆ ಬಿಂಬಿಸಲಾಗುತ್ತಿದೆ. ಇದನ್ನು ತೊಡೆದು ಹಾಕಲು ಪ್ರಾದೇಶಿಕ ಪಕ್ಷಗಳೂ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಪ್ರಾದೇಶಿಕ ಪಕ್ಷಗಳೂ ಅಧಿಕಾರಕ್ಕೆ ಬಂದರೆ ಮಾತ್ರ ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಬರಲಿದೆ. ಶಬರಿಮಲೆ ದೇಗುಲ ಪ್ರವೇಶ ಮಾಡುವುದು ಮಹಿಳೆಯರ ಹಕ್ಕು. ಇದಕ್ಕೆ ಅವಕಾಶ ನೀಡಬೇಕು. ಆದರೆ, ಇದಕ್ಕೆ ಬಿಜೆಪಿ, ಕಾಂಗ್ರೆಸ್ ತಡೆಯೊಡ್ಡುತ್ತಿವೆ. ಇದು ಖಂಡನೀಯ ಎಂದು ಟೀಕಿಸಿದ್ದಾರೆ.
ಉನ್ನತ ಸ್ಥಾನದಲ್ಲಿ ಅಧಿಕಾರ ನಡೆಸುತ್ತಿರುವವರು ದೇಶದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯಬೇಕು. ಆದರೆ, ಅವರು ಮೌನ ವಹಿಸಿರುವುದರಿಂದ ಇದು ಇನ್ನಷ್ಟು ಹೆಚ್ಚಾಗಿದೆ. ಇದು ಪುಂಡಾಟಿಕೆಯನ್ನೂ ಉತ್ತೇಜಿಸಿದೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳ ಕುರಿತು 2015ರಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೆ. ದೇಶ ವಿದೇಶದ ವ್ಯಕ್ತಿಗಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಮೋದಿ, ಈವರೆಗೆ ನನ್ನ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಇಂತಹ ವಿಚಾರದಲ್ಲಿ ಮೋದಿ ಮೌನವಾಗಿರುವುದರಿಂದ ಅವರ ಹಿಂಬಾಲಕರ ಅಟ್ಟಹಾಸ ತೀವ್ರವಾಗಿದೆ. ಇದೆಲ್ಲಾ ಕೊನೆಯಾಗಬೇಕು ಎಂದು ಹೇಳಿದ್ದಾರೆ.