ಮಂಗಳೂರು, ನ. 27 (DaijiworldNews/HR): ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ರತ್ನಾಕರ್ ನನ್ನು ಬಂಧಿಸಿ 2 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮಹಿಳಾ ಪೊಲೀಸರು ವೈದ್ಯಾಧಿಕಾರಿ ಡಾ. ರತ್ನಾಕರ್ನನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಶನಿವಾರ ಮೂವರು ಸಂತ್ರಸ್ತರು ಹಾಗೂ ಮತ್ತೊಬ್ಬ ಮಹಿಳೆ ಸೇರಿ ನಾಲ್ವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಅಧೀನದಲ್ಲಿ ಬರುವ ಜಿಲ್ಲಾ ಕಾರ್ಯಕ್ರಮಾಧಿಕಾರಿಯಾಗಿರುವ ಡಾ. ಡಾ.ರತ್ನಾಕರ್ ಕಚೇರಿಯ ವೇಳೆಯಲ್ಲೇ ಕಚೇರಿಯ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.