ಅಯೋಧ್ಯೆ, ನ24(SS): ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್ ಮತ್ತು ಶಿವಸೇನೆಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದೆ. ಈ ಹಿನ್ನೆಲೆ ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ನಾಳೆ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದೆ.
ಅಸಂಖ್ಯಾತ ವಿ.ಹೆಚ್.ಪಿ, ಶಿವಸೇನೆ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರು ಅಯೋಧ್ಯೆಗೆ ಆಗಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮಾತ್ರವಲ್ಲ 144 ಜಾರಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಧರ್ಮ ಸಭೆ ಹೆಸರಿನಲ್ಲಿ ನಡೆಯುವ ಈ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರಾಮಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಶಿವಸೇನೆ ರಾಮ ಮಂದಿರಕ್ಕೆ ಅಯೋಧ್ಯೆಯಲ್ಲಿ ಪ್ರತ್ಯೇಕ ರ್ಯಾಲಿ ನಡೆಸುತ್ತಿದೆ. ಶಿವಸೇನೆ ಕೂಡ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಯತ್ನಿಸುತ್ತಿರುವುದರಿಂದ 1992ರ ಬಾಬ್ರಿ ಮಸೀದಿ ಧ್ವಂಸ ಘಟನೆ ಬಳಿಕ ಮೊದಲ ಬಾರಿ ಇಷ್ಟೊಂದು ಜನರನ್ನು ಅಯೋಧ್ಯೆಯಲ್ಲಿ ಕಾಣುವ ಸಾಧ್ಯತೆ ನಿಚ್ಚಳವಾಗಿದೆ.
ಅಯೋಧ್ಯೆ ರಾಮಜನ್ಮಭೂಮಿ ವಿವಾದ ಕುರಿತು ವಿಚಾರಣೆಯನ್ನು ಜನವರಿಗೆ ಮುಂದೂಡಿದ ಹಿನ್ನಲೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಕೂಗು ಎದ್ದಿತ್ತು. ಅದರ ಮುಂದುವರೆದ ಭಾಗವಾಗಿ, ರಾಮಮಂದಿರ ನಿರ್ಮಾಣ ಸಂಬಂಧ ಜನ ಬೆಂಬಲ ಕ್ರೋಢೀಕರಿಸಲು ಹಾಗೂ ಸರ್ಕಾರದ ಮೇಲೆ ಒತ್ತರ ಹೇರಲು ವಿಶ್ವ ಹಿಂದೂ ಪರಿಷತ್ ದೇಶದಾದ್ಯಂತ ಧರ್ಮ ಸಭೆಗಳನ್ನು ನಡೆಸಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.