ಕಾರ್ಕಳ, ನ.25 (DaijiworldNews/HR): ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಕುಕ್ಕುಂದೂರು ದುರ್ಗಾನಗರದ ಅಶ್ವಥಕಟ್ಟೆ ಸಮೀಪದಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಮಹಮ್ಮದ್ ರಫೀಕ್ ಘಟನೆಯಲ್ಲಿ ಮೃತಪಟ್ಟವರು.
ಮೃತ ವ್ಯಕ್ತಿ ರಫೀಕ್ ತನ್ನ ಸಹೋದರ ನಜೀರ್ ಎಂಬವರ ಜೊತೆಗೆ ಓಮಿನಿ ಕಾರಿನಲ್ಲಿ ಉಡುಪಿಯಿಂದ ಮನೆಗೆ ಬರುತ್ತಿದ್ದರು. ದುರ್ಗಾನಗರದ ಅಶ್ವಥಕಟ್ಟೆ ಹತ್ತಿರ ವಾಹನ ನಿಂತಾಗ ಅದರಲ್ಲಿದ್ದ ರಫೀಕ್ ಹೊರಬಂದು ರಸ್ತೆ ದಾಟಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮತ್ತೊಂದು ಕಾರು ಇವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ರಸ್ತೆಗೆ ಬಿದ್ದಿದ್ದ ರಫೀಕ್ ಅವರ ತಲೆಯ ಹಿಂಬದಿಗೆ ರಕ್ತಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಕಾರು ಚಲಾಯಿಸಿ ಘಟನೆಗೆ ಕಾರಣನಾದ ಕೆದಿಂಜೆಯ ಅರವಿಂದ ಕಾಮತ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.