ಉಡುಪಿ, ನ 23(SM): ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರವಾಗಿ, ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ ಎಂದು ಕೇಂದ್ರ ಸರ್ಕಾರಕ್ಕೆ ಪೇಜಾವರ ಸ್ವಾಮೀಜಿ ಹೇಳಿದ್ದಾರೆ. ಸರ್ಕಾರ ಬಿದ್ದರೂ ಪರವಾಗಿಲ್ಲ, ಮುಂದೆ ಅನುಕೂಲವೇ ಆಗಲಿದೆ. ಇದೇ ಮಾತನು ವಾಜಪೇಯಿ ಸರಕಾರ ಇರುವಾಗಲೂ ಹೇಳಿದ್ದೆ. ಆದರೆ ಹಾಸ್ಯವಾಗಿ ತೆಗೆದು ಕೊಂಡಿದ್ದರು, ಆಗ ಬಹುಮತವು ಇರಲಿಲ್ಲ. ಈಗ ದೃಢ ನಿರ್ಧಾರದಿಂದ ಕೇಂದ್ರ ಸರ್ಕಾರಕ್ಕೂ ಅನುಕೂಲವಾಗಲಿದೆ ಎಂದಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ವಾಜಪೇಯಿ ಸರ್ಕಾರಕ್ಕಿಂತ ಉತ್ತಮ ವಾತಾವರಣ ಈಗ ಇದೆ. ವಿಪಕ್ಷ ಕಾಂಗ್ರೆಸ್ ಕೂಡಾ ಈಗ ವಿರೋಧ ಮಾಡುವ ಸಾಧ್ಯತೆ ಕಡಿಮೆ. ಚುನಾವಣೆ ಹತ್ತಿರ ಇರುವುದರಿಂದ ಯಾರು ವಿರೋಧ ಮಾಡುವುದಿಲ್ಲ. ಮಾಡಿದರೆ ಕಾಂಗ್ರೆಸ್ ಗೆ ಹಾನಿ, ಬಿಜೆಪಿಗೆ ಜಯ ಬರಬಹುದು. ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ತಟಸ್ಥವಾಗಿ ಎಲ್ಲವನ್ನೂ ನೋಡುತ್ತಿದೆ. ಕಾಂಗ್ರೆಸ್ ಬೆಂಬಲಿಸುತ್ತಲೂ ಇಲ್ಲ, ವಿರೋಧಿಸುತ್ತಲೂ ಇಲ್ಲ. ಮಂದಿರ ನಿರ್ಮಾಣಕ್ಕೆ ಈಗ ಅನುಕೂಲವಾದ ವಾತಾವರಣವಿದೆ. ಕಾಂಗ್ರೆಸ್ ಪಕ್ಷ ವಿರೋಧಿಸಿದರೆ ಪಕ್ಷಕ್ಕೆ ತೊಂದರೆ ಆಗಬಹುದೆಂದು ಪೇಜಾವರ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.