ಮಂಗಳೂರು,ಅ15: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಅಂದರ್ - ಬಾಹರ್ ಎಂಬ ಜೂಜಾಟವಾಡುತ್ತಿದ್ದ 12 ಜನರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ, ಮುಚ್ಚಿಲಕೋಡಿ ಗಣೇಶ್ (38), ಕೊಣಾಜೆ ತಿಲಕ್ (28), ಗೋಪಾಲಕೃಷ್ಣ ದೇವಸ್ಥಾನದ ಬಳಿ ಪ್ರಸಾದ್ (38), ಪರಂಡೆ ಮನೆ ಜಯರಾಜ್ (27), ಮುಚ್ಚಿಲಕೋಡಿ ಜಯರಾಜ್ (26), ಮುಚ್ಚಿಲಕೋಡಿ ಲೋಕೇಶ್ (32), ಪರಂಡೆ ಮನೆ ಕೇಶವ (27), ಕೊನಿಲ ಮನೆ ಚಂದ್ರಹಾಸ ದಾಸ್ (26), ಪರಂಡೆ ಮನೆ ನವೀನ್ ಕುಮಾರ್(26), ಯಶವಂತಿಪುರ ರೋಹಿತ್ (27), ಪರಂಡೆ ಮನೆ ರಂಜಿತ್ (29), ಯಶವಂತಿಪುರ ಶರತ್ ರಾಜ್ (25) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಬಂಧಿತರಿಂದ 22,485ರೂ. ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟವಾಡುತ್ತಿದ್ದವರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.