ಮಂಗಳೂರು,ನ 23(MSP): ತುಳುನಾಡಿನ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಾಧನೆ ಮಾಡಿದ್ದ, ಕಳೆದ 15 ವರ್ಷಗಳಿಂದ ಕಂಬಳ ಕ್ರೀಡೆಯಲ್ಲಿ ಅನಭಿಷಿಕ್ತ ದೊರೆಯಾಗಿದ್ದ, ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣನ ನೆನಪಿಗಾಗಿ, ಮತ್ತು ಗೌರವಕ್ಕಾಗಿ ಅಮೃತಶಿಲೆಯ ಸಮಾಧಿ ಹಾಗೂ ರಾಕೆಟ್ ನ ಪ್ರತಿಮೆಯ ನಿರ್ಮಾಣಕ್ಕೆ ಮನೆ ಮಂದಿ ಮುಂದಾಗಿದ್ದಾರೆ.
ಕಂಬಳ ಸಾಧಕ ನಂದಳಿಕೆಯ ಶ್ರೀಕಾಂತ್ ಭಟ್ ಮನೆಯ ಕಂಬಳದ ಕೋಣ 20 ವರ್ಷದ ರಾಕೆಟ್, ನವೆಂಬರ್ 20ರಂದು ಮೃತಪಟ್ಟಿತ್ತು. ವಯೋಸಹಜ ಅನಾರೋಗ್ಯಕ್ಕೀಡಾಗಿ ಔಷಧೋಪಚಾರ ಮಾಡಿದರೂ ಯಾವುದು ಫಲ ನೀಡದೆ ಬಾರದ ಲೋಕಕ್ಕೆ ಪ್ರಯಾಣಿಸಿತ್ತು.
ಉಡುಪಿ ಕೋಟದ ಪೈರು ತಳಿ ಆಗಿರುವ ರಾಕೆಟ್ ಮೋಡ 2014 ರಲ್ಲಿ ತನ್ನ ಜತೆಗಾರ ಕುಟ್ಟಿಯೊಂದಿಗೆ 144 ಮೀ ನ್ನು 13.57 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ಕಂಬಳ ಇತಿಹಾಸದಲ್ಲಿ ಇನ್ನು ಅಳಿಸಲಾಗದ ದಾಖಲೆ ಸೃಷ್ಟಿಸಿದ್ದ. ಇದುವರೆಗೆ 150ಕ್ಕೂ ಅಧಿಕ ಪದಕ ಗೆದ್ದಿದ್ದ ರಾಕೆಟ್ ತನ್ನದೇ ಅಭಿಮಾನಿಗಳನ್ನು ಸಂಪಾದಿಸಿದ್ದ. ಸಾವಿನ ನಂತರ ಆತನ ಅಂತ್ಯ ಸಂಸ್ಕಾರದಲ್ಲಿ ೫೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಲಕ್ಷಾಂತರ ಮಂದಿ ಸಾಮಾಜಿಕ ಜಾಲಾತಾಣಗಳಾದ ಫೇಸ್ಬುಕ್, ವ್ಯಾಟ್ಸಪ್ಗಳಲ್ಲಿ ಸಾವಿರಾರು ಮಂದಿ ದಾಖಲೆಯ ಸರದಾರನ ಸಾವಿಗೆ ಕಂಬನಿ ಮಿಡಿದಿದಿದ್ದರು.
ಹೀಗಾಗಿ ಕಂಬಳ ಗದ್ದೆಯಲ್ಲಿ ಚಿಗರೆಯ ಓಟಗಾರ. ವಿಶೇಷ ಸಾಧಕನ ನೆನಪಿಗಾಗಿ ,ಮನೆಯ ಸನಿಹವಿರುವ ಕಂಬಳ ಕೋಣಗಳ ಈಜು ಕೊಳದ ಪಕ್ಕದಲ್ಲೇ ಅಮೃತಶಿಲೆಯಲ್ಲಿ ಸಮಾಧಿ ಹಾಗೂ ರಾಕೆಟ್ ಮೋಡೆಯ ಪ್ರತಿಮೆಯನ್ನು ನಿರ್ಮಾಣ ಮಾಡಲು ಶ್ರೀಕಾಂತ್ ಭಟ್ ಚಿಂತನೆ ನಡೆಸಿದ್ದಾರೆ.