ಬೆಂಗಳೂರು, ನ 23(MSP): ಇನ್ನು ಮುಂದೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳು ಹೆಚ್ಚು ಸುರಕ್ಷಿತವಾಗಿರಲಿದೆ. ಹೌದು ನೀರು ಬಿದ್ದರೆ, ಅಗ್ನಿ ಅವಘಡಕ್ಕೆ ಒಳಗಾದರೆ ಹಾಳಾಗದಂತಹ ಸುರಕ್ಷಿತವಾದ ಅಂಕಪಟ್ಟಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಈ ವರ್ಷದ ಮಾರ್ಚ್/ ಏಪ್ರಿಲ್ ಪರೀಕ್ಷೆಯಿಂದಲೇ ಜಾರಿಗೆ ತರಲು ಮಂಡಳಿ ಪ್ರಯತ್ನಿಸುತ್ತಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಳಾಗುತ್ತದೆ ಎಂದು ಚಿಂತಿಸಬೇಕಾಗಿಲ್ಲ.
ಇಲ್ಲಿಯವರೆಗೆ ಹತ್ತನೇ ತರಗತಿಯ ಅಂಕಪಟ್ಟಿಯನ್ನು ಲ್ಯಾಮಿನೇಟ್ ಮಾಡಿ ಮಾತ್ರ ನೀಡಲಾಗುತ್ತಿದೆ. ಆದರೆ ಇದು ಸಾಕಾಗುವುದಿಲ್ಲ. ಬೇಗನೆ ಹಾಳಾಗಿ ಹೋಗುತ್ತದೆ ಎಂಬ ದೂರು ಮಂಡಳಿಗೆ ಬರುತ್ತಿತ್ತು. ಅಂಕಪಟ್ಟಿ ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ. ಅಲ್ಲದೆ ಪ್ರಾಕೃತಿಕ ಅವಘಡ ನಡೆದರೆ, ಅಥವಾ ಇನ್ಯಾವುದೋ ಅವಘಡದಿಂದ ಮನೆಯಲ್ಲಿರುವ ದಾಖಲಾತಿ ನಾಶವಾದರೂ ಮಾರ್ಕ್ ಸರ್ಟಿಫಿಕೇಟ್ ಹಾಳಾಗಬಾರದು ಎಂಬ ಚಿಂತನೆಯೊಂದಿಗೆ ನೀರು ಬಿದ್ದರೆ, ಅಗ್ನಿ ಅವಘಡಕ್ಕೆ ಒಳಗಾದರೆ ಮತ್ತು ಹರಿದು ಹಾಕಲು ಸಾಧ್ಯವಾಗದಂತಹ ಸುರಕ್ಷಿತವಾದ ಅಂಕಪಟ್ಟಿ ಹಾಳಾಗದಂತಹ ಅಂಕಪಟ್ಟಿ ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲಾ ಹೇಳಿದರು.
ಸುರಕ್ಷತೆಯ ಅಂಕಪಟ್ಟಿ ತಯಾರಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಿದೆ. ಈ ವರ್ಷ ನೀರು ಬಿದ್ದರೆ ಹಾಳಾಗದಂತಹ ಮುಂದಿನ ವರ್ಷ ಟೀರ್ ಪ್ರೂಫ್ ಮತ್ತು ಅದಕ್ಕಿಂತ ಮುಂದಿನ ವರ್ಷ ಫೈರ್ ಪ್ರೂಫ್ ಅಂಕಪಟ್ಟಿಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಮಂಡಳಿ ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.