ಮಂಗಳೂರು,ನ 23(MSP): ನಿಮ್ಮ ಮೊಬೈಲ್ ಗೆ ಒಂದು ಮೆಸೇಜ್ ಬರುತ್ತೆ. ತೆರೆದು ನೋಡಿದರೆ ನಿಮ್ಮ ಬ್ಯಾಂಕ್ ನಿಂದ ಬಂದ ಎಸ್ಸೆಮ್ಸೆಸ್ ಆಗಿರುತ್ತೆ. "ನಿಮ್ಮ ಕಾರ್ಡ್ ನಮ್ಮ ವೆಬ್ ಸೈಟ್ ನಲ್ಲಿ ನೋಂದಾವಣೆಯಾಗಿಲ್ಲ .ದಯವಿಟ್ಟು ಅಪ್ ಡೇಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ತುಂಬಿ " ಎಂದು. ಹಾಗೆಂದು ಇದನ್ನು ಕ್ಲಿಕ್ ಮಾಡಿ ನೋಡಿದರೆ ಅಲ್ಲಿರುವುದು ಥೇಟ್ ಬ್ಯಾಂಕ್ ವೆಬ್ ಸೈಟ್. ಹಾಗೆಂದು ನೀವು ವಿವರಗಳನ್ನು ತುಂಬಿದ್ರೋ ನಿಮ್ಮ ಖಾತೆಯಲ್ಲಿದ್ದ ಹಣ ಕ್ಷಣ ಮಾತ್ರದಲ್ಲಿ ಮಂಗಮಾಯ..
ಹೌದು ಇಂತಹ ಹೊಸ ಮಾದರಿಯ ಫಿಶಿಂಗ್ ಜಾಲ ಇದೀಗ ಸಕ್ರೀಯವಾಗಿದ್ದು,ಬ್ಯಾಂಕ್ ಹೆಸರಿನಲ್ಲಿ ಮೆಸೇಜ್ ಕಳುಹಿಸಿ ಆನ್ ಲೈನ್ ಮೂಲಕ ಎಟಿಎಂ ಕಾರ್ಡ್ ಹಾಗೂ ವಿವರ ಸಂಗ್ರಹಿಸಿ ಹಣ ಲಪಟಾಯಿಸುವವರ ಮೋಸದ ಜಾಲಕ್ಕೆ ಬೀಳದಂತೆ ಜಾಗೃತರಾಗಿರಲು ಪೊಲೀಸರು ಸಲಹೆ ನೀಡಿದ್ದಾರೆ.
ನಕಲಿ ವೆಬ್ ಸೈಟ್ ಲಿಂಕ್ ಗಳನ್ನು ಇಮೇಲ್/ ಮೆಸೇಜ್ ನಲ್ಲಿ ಕಳುಹಿಸುತ್ತಾರೆ.ಬ್ಯಾಂಕ್ ಸೈಟ್ ನಲ್ಲಿ ನಿಮ್ಮ ಕ್ರೆಡಿಡ್ -ಡೆಬಿಟ್ ಎಟಿಎಂ ಕಾರ್ಡ್ ರಿಜಿಸ್ಟರ್ಡ್ ಆಗಿಲ್ಲ . ಅಪ್ಡೇಟ್ ಮಾಡಲು ಕಾರ್ಡ್ ನಂಬರ್, ಸಿವಿವಿ ನಂಬರ್, ಹುಟ್ಟಿದ ದಿನಾಂಕ ದಾಖಲಿಸುವಂತೆ ಹೇಳುತ್ತದೆ.ವೇಳೆ ಇದು ನಿಜ ಎಂದು ನಂಬಿ ನೀವು ಮಾಹಿತಿ ಅಪ್ಲೋಡ್ ಮಾಡಿದರೆ ನಿಮ್ಮ ಖಾತೆಯಿಂದ ಕ್ಷಣ ಮಾತ್ರದಲ್ಲಿ ಹ್ಯಾಕ್ ಮಾಡಿ ಹಣ ಲಪಟಾಯಿಸುತ್ತಾರೆ.
ಯಾವುದೇ ಕಾರಣಕ್ಕೂ ಬ್ಯಾಂಕ್ಗಳು ಇಂತಹ ಮಾಹಿತಿಯನ್ನು ತಮ್ಮ ಗ್ರಾಹಕರಿಂದ ಸಂಗ್ರಹಿಸುವುದಿಲ್ಲ. ಇಂತಹ ಮೋಸದ ಜಾಲಕ್ಕೆ ಬೀಳದಿರುವಂತೆ, ಜಾಗೃತರಾಗಿರಲು ಸೈಬರ್ ಕ್ರೈಂ ಪೊಲೀಸರು ಸಲಹೆ ಮಾಡಿದ್ದಾರೆ.