ಬೆಂಗಳೂರು,ನ 23(MSP): ತಾನು ಇನ್ನು ಮಾಧ್ಯಮಗಳ ಮಾತನಾಡುವುದಿಲ್ಲ. ಪತ್ರಿಕಾಗೋಷ್ಠಿ ಯನ್ನೂ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರೈತ ಮಹಿಳೆಯ ಹೇಳಿಕೆಯಿಂದ ಸಾಕಷ್ಟು ಹೈರಾಣಾಗಿರುವ ಅವರು , ನಾನು ಯಾವುದಾದರೂ ಕಾರ್ಯಕ್ರಮದ ವೇದಿಕೆಯಲ್ಲಿ ಎಷ್ಟು ಮಾತನಾಡುತ್ತೇನೋ ಅದನ್ನು ಮಾತ್ರ ಬರೆದುಕೊಳ್ಳಿ, ಬೇಡವಾದರೆ ಬಿಡಿ. ನಾನು ಏನೇ ಮಾತನಾಡಿದರೂ ಎಲ್ಲವನ್ನೂ ಕೂಡಾ ತಪ್ಪಾಗಿಯೇ ಅರ್ಥೈಸುತ್ತಾರೆ. ಅದ್ದರಿಂದ ಮಾಧ್ಯಮಗಳ ಮುಂದೆ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೇಲಿನ ಅಸಮಧಾನ ತೋಡಿಕೊಂಡರು.
ಹಾಗೆಂದು ನನ್ನ ಮೇಲಿನ ಟೀಕೆಗಳಿಗೆ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಆದರೆ ಇಲ್ಲೂ ಒಂದು ವರ್ಗ ಇದೆ. ಅವರಿಗೆ ನನ್ನನ್ನು ಕಂಡರಾಗುವುದಿಲ್ಲ. ಹೀಗಾಗಿ ನಾನು ಮಾಡಿದ ಎಲ್ಲಾ ಕೆಲಸವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಾರೆ. ತಪ್ಪು ಹುಡುಕುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾರಿಗೂ ಮೋಸ ಮಾಡಿ ಈ ಸ್ಥಾನಕ್ಕೆ ಏರಿಲ್ಲ.ಮತ್ತು ನಾನು ಇಲ್ಲಿಯೇ ಶಾಶ್ವತವಾಗಿಯೀ ಇರುವುದಿಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಸ್ನೇಹಿತರು ನಮ್ಮನ್ನು ಬೆಂಬಲಿಸುತ್ತಾರೋ ಅಲ್ಲಿಯವರೆಗೂ ಅಧಿಕಾರದಲ್ಲಿರುತ್ತೇನೆ. ಜೆಡಿಎಸ್ 38 ಶಾಸಕರನ್ನಷ್ಟೇ ಹೊಂದಿರಬಹುದು. ಪರಮೇಶ್ವರ್ ಲೀಡರ್ ಶಿಪ್ ನಲ್ಲಿ ಕಾಂಗ್ರೆಸ್ನ 78 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರಿಂದ ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದರು.