ಮಂಗಳೂರು, ನ.22 (DaijiworldNews/PY): ಸಮೀಪದ ಪರಾರಿಯ ರಾಜ್ ಟೈಲ್ಸ್ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷದ ಬಾಲಕಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಹಲವು ಮಂದಿ ಯುವಕರನ್ನು ವಿಚಾರಣೆಯ ಸಲುವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕೃತ್ಯದ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "8 ವರ್ಷದ ಬಾಲಕಿಯ ಹತ್ಯೆಯನ್ನು ಕಾರ್ಖಾನೆಯೊಳಗಿನ ಕಾರ್ಮಿಕರೇ ಎಸಗಿರುವ ಬಗ್ಗೆ ಅನುಮಾನವಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆಯ ಸಲುವಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
ಘಟನೆಯ ವಿವರ:
ರಾಜ್ ಟೈಲ್ಸ್ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷದ ಬಾಲಕಿಯನ್ನು ಹತ್ಯೆಗೈದ ಘಟನೆ ನ.21ರ ಭಾನುವಾರ ಸಂಜೆ ಬೆಳಕಿಗೆ ಬಂದಿತ್ತು. ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಗುರುಪುರ ಸೇತುವೆ ಬಳಿಯ ಪರಾರಿ ಕ್ರಾಸ್ನಲ್ಲಿ ರಾಜ್ ಟೈಲ್ಸ್ ಫ್ಯಾಕ್ಟರಿ ಇದ್ದು, ಅಲ್ಲಿ ಕರ್ನಾಟಕದ 10 ಮಂದಿ, ಉತ್ತರ ಭಾರತ ಮೂಲದ ಹಲವು ಯುವಕರು ಹಾಗೂ ನಾಲ್ಕೈದು ಮಹಿಳೆಯರು ಸೇರಿದಂತೆ 30ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅಸ್ಸಾಂ ಮೂಲದ ಕುಟುಂಬದ ಮಹಿಳೆಯ 8 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯನ್ನು ಹುಡುಕಾಡಿದಾಗ ಸಂಜೆ 6 ಗಂಟೆ ಸುಮಾರಿಗೆ ಕಾರ್ಖಾನೆಯ ಸಮೀಪದ ಮೋರಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.