ಉಡುಪಿ, ನ.21 (DaijiworldNews/HR): ಕೃಷಿ ಕಾಯ್ದೆಯನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಗೊಂದಲ ನಿರ್ಮಾಣವಾಗಿತ್ತು. ಹಾಗಾಗಿ ಒಂದು ಒಳ್ಳೆಯ ಮಸೂದೆಯನ್ನು ವಾಪಸ್ ಪಡೆದುಕೊಳ್ಳಲಾಗಿದ್ದು, ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಮಂಡನೆ ಮಾಡಿಯೇ ಮಾಡುತ್ತಾರೆ" ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೂತು ಚರ್ಚಿಸಲು ಹೋರಾಟಗಾರರು ತಯಾರಿರಲಿಲ್ಲ. ನಮ್ಮ ದೇಶದಲ್ಲಿ ವಿಪಕ್ಷಗಳು ವಿರೋಧಪಕ್ಷಗಳಾಗಿವೆ. ಕೇಂದ್ರ ಸರಕಾರ ಮತ್ತೆ ರೈತರ ಜೊತೆ ಚರ್ಚಿಸಲಿದೆ. ಸರಕಾರದ ಜೊತೆ ಚರ್ಚಿಸದೆ ವಿರೋಧಿಸುವುದು ಪ್ರಜಾಪ್ರಭುತ್ವವೇ ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕರ್ನಾಟಕದಲ್ಲೂ ಸರಕಾರದ ಜೊತೆ ವಿಪಕ್ಷಗಳು ಚರ್ಚಿಸಲು ಸಿದ್ಧವಿರಲಿಲ್ಲ. ವಿರೋಧಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದ್ದಾರೆ. ನಾವು ರಾಜಕೀಯ ಲಾಭದ ಉದ್ದೇಶದಿಂದ ಕಾಯಿದೆಯನ್ನು ವಾಪಸು ಪಡೆದಿದ್ದಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಾಪಾಸು ಪಡೆಯಲಾಗಿದೆ" ಎಂದರು.
"ಎಲ್ಲಾ ಕಾಯ್ದೆಗಳನ್ನು ಬೀದಿಯಲ್ಲಿ ನಿಂತು ನಿರ್ಧರಿಸುವುದು ಸಾಧ್ಯವಿಲ್ಲ. ಒಂದು ವರ್ಷಗಳ ಕಾಲ ಕೇಂದ್ರ ಸರಕಾರ ಮನವೊಲಿಸಲು ಪ್ರಯತ್ನಿಸಿದೆ. ಮೋದಿ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎಂದರೆ ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ ಎಂದು ಅರ್ಥ" ಎಂದು ಹೇಳಿದ್ದಾರೆ.