ಉಡುಪಿ, ನ 22(SM): ಒಂದೆರಡು ತಿಂಗಳಲ್ಲಿ ಹೆಜಮಾಡಿ ಬಂದರು ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರೊಂದಿಗೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಈ ಯೋಜನೆ ಎರಡು ಜಿಲ್ಲೆಗಳ ಗಡಿಪ್ರದೇಶದಲ್ಲಿದೆ. ಅಲ್ಲದೆ ಈ ಯೋಜನೆಯಿಂದ ಸ್ಥಳೀಯ ಮೀನುಗಾರರಿಗೆ ತುಂಬಾ ಪ್ರಯೋಜನವಾಗಲಿದೆ. ಬೋಟುಗಳನ್ನು ಇಲ್ಲಿಯೇ ತಂಗುದಾಣದಲ್ಲಿರಿಸುವ ಮೂಲಕ ಮೀನುಗಾರಿಕೆಗೆ ತುಂಬಾ ಉಪಯುಕ್ತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಸಿರು ನಿಶಾನೆ ಬಂದಿದ್ದು ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾರ್ಯಾರಂಭ ಗೊಳ್ಳಲಿದೆ ಎಂದರು.
ಸ್ಥಳೀಯರಲ್ಲಿ ಸ್ಥಳದ ಬಗ್ಗೆ ಏನಾದರೂ ಗೊಂದಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದಕ್ಷಿಣ ಕನ್ನಡ ಡಿ.ಸಿ ಶಶಿಕಾಂತ ಸೆಂಥಿಲ್, ಇಲ್ಲಿ ಬಂದರು ಕಾಮಗಾರಿ ಪ್ರಾರಂಭವಾದರೆ ಬ್ರೇಕ್ ವಾಟರ್ ನಿರ್ಮಿಸಿದ ಸಂದರ್ಭದಲ್ಲಿ ಉಳ್ಳಾಲದಲ್ಲಿ ಆದಂತೆ ನಮ್ಮಲ್ಲೂ ಸಮುದ್ರ ಕೊರೆತ ಆಗುವ ಸಂಭವ ಇದೆ ಎಂದು ದೂರು ಬಂದಿದೆ. ಅದರ ಪ್ರಕಾರ ಇವತ್ತು ಸ್ಥಳ ಪರಿಶೀಲನೆ ಮಾಡಿದ್ದೇನೆ. ನಮ್ಮ ಕಡೆಯಿಂದ ಯೋಜನೆಗೆ ಸಹಕಾರ ನೀಡುತ್ತೇವೆ ಎಂದರು.
ಈ ಸಂದರ್ಭ ಮೀನುಗಾರ ಮುಖಂಡರು, ಪಿ.ಡಿ.ಒ ಮಮತಾ ಶೆಟ್ಟಿ, ಹರಿಶ್ಚಂದ್ರ ಮೆಂಡನ್, ಪ್ರಾಣೇಶ್ ಹೆಜಮಾಡಿ, ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಹಾಯಕ ಇಂಜಿನಿಯರ್ ಮಂಚೇಗೌಡ, ಸಹಾಯಕ ಇಂಜಿನಿಯರ್ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.