ಮಂಗಳೂರು, ನ 22(MSP): ಚಂಡಮಾರುತವನ್ನು ಬೀಸುವ ಮೊದಲೇ ಕಡಲ ತೀರದ ಜನರಿಗೆ, ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವಂತಹ ಸೈಕ್ಲೋನ್ ಶೆಲ್ಟರ್ ಹಾಗೂ ಸೈಕ್ಲೋನ್ ಸೈರನ್ ಟವರ್ಸ್ ಕರಾವಳಿ ಜಿಲ್ಲೆಯಲ್ಲಿ ತಲೆ ಎತ್ತಲಿದೆ.
ಸಮುದ್ರತೀರ ಪ್ರದೇಶವಾದ ಕರಾವಳಿ ಜಿಲ್ಲೆಗಳ ಮೇಲೆ ಚಂಡಮಾರುತದ ಕರಿಛಾಯೆ ಇದ್ದೇ ಇರುತ್ತೆ. ಬಂಗಾಳಕೊಲ್ಲಿ,ಹಾಗೂ ಅರಬ್ಬೀ ಸಮುದ್ರದಲ್ಲಿ ಆಗಾಗ್ಗೆ ಉಂಟಾಗುವ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸೈಕ್ಲೋನ್ ಶೆಲ್ಟರ್ ಟವರ್ ಹಾಗೂ ಸೈಕ್ಲೋನ್ ಸೈರನ್ ಟವರ್ಸ್ ನಿರ್ಮಾಣವಾಗಲಿದೆ. ಚಂಡಮಾರುತ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ಮೊದಲೇ ಸೈರಲ್ ಮೊಳಗಲಿದೆ,
ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೈಕ್ಲೋನ್ ಶೆಲ್ಟರ್ ಹಾಗೂ ಸೈರನ್ ಟವರ್ಸ್ ನಿರ್ಮಾಣವಾಗಲಿದೆ. ದ.ಕ ಜಿಲ್ಲೆಯಲ್ಲಿ - 7, ಉಡುಪಿಯಲ್ಲಿ 6, ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 13 ಸೈಕ್ಲೋನ್ ಸೈರನ್ ಟವರ್ಗಳು ನಿರ್ಮಾಣಗೊಳ್ಳಲಿವೆ. ಇವು ಎಲ್ಲೆಲ್ಲಿ ಆಗಬೇಕು ಎನ್ನುವ ಬಗ್ಗೆ ಸರ್ಕಾರ ಅಧೀನದ ಟೆಲಿಕಮ್ಯುನಿಕೇಶನ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ತಜ್ಞರು ಸಮೀಕ್ಷೆ ನಡೆಸಿದ್ದಾರೆ. ಶಾಲೆಗಳು, ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಆಯ್ಖೆ ಮಾಡಿಕೊಂಡಿದ್ದು, ಅವುಗಳಲ್ಲೇ ಟವರ್ಗಳನ್ನು ಅಳವಡಿಸಲಾಗುವುದು.
ಸುಮಾರು 128 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುವ ಈ ಯೋಜನೆಯಲ್ಲಿ ಧಿನಿಕ ಸ್ಯಾಟಲೈಟ್ ಫೋನ್, ಡಿಜಿಟಲ್ ರೇಡಿಯೋ ಸಹಿತ ಹಲವು ಅಂಶಗಳನ್ನು ಒಳಗೊಂಡಿದೆ. ಚಂಡಮಾರುತ ಬೀಸುವ ಕನಿಷ್ಟ 12ರಿಂದ 24 ಗಂಟೆ ಮೊದಲೇ ಉಪಗ್ರಹ ನೆರವಿನಿಂದ ಸೈಕ್ಲೋನ್ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುವುದು. 2 ಕಿ.ಮೀ ದೂರಕ್ಕೂ ಇದು ಕೇಳಲಿದೆ.