ಕಡಬ, ಅ 18 (DaijiworldNews/MS): ವಿನೂತನ ಯೋಜನೆಯಾದ ಬಸ್ಸು ನಿಲ್ದಾಣದಲ್ಲಿಯೇ ಪುಸ್ತಕ ಅಥವಾ ದಿನ ಪತ್ರಿಕೆಗಳನ್ನು ಓದುವ ಪುಸ್ತಕದ ಗೂಡಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ನ.18ರ ಗುರುವಾರ ಕಡಬ ತಾಲೂಕಿನ ಕೊಂಬಾರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಈ ವಿನೂತನ ಯೋಜನೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಅಲ್ಲಿನ ಬಸ್ ನಿಲ್ದಾಣಗಳಲ್ಲಿ ದೈನಂದಿನ ದಿನಪತ್ರಿಕೆಗಳು ಹಾಗೂ ಕೆಲವೊಂದು ಉಪಯುಕ್ತ ಪುಸ್ತಕಗಳನ್ನು ಪುಸ್ತಕದ ಗೂಡಿನಲ್ಲಿ ಇರಿಸುವುದಾಗಿದೆ.
ಆಸಕ್ತ ಓದುಗರು ಬಸ್ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಬಸ್ ಕಾಯುವ ವೇಳೆಯಲ್ಲಿ ಅವುಗಳನ್ನು ಓದಿ, ಬಸ್ ಹತ್ತುವಾಗ ಪುನಃ ಅವುಗಳನ್ನು ಗೂಡಿನಲ್ಲಿ ಇರಿಸಬೇಕು, ಅದಕ್ಕೆಂದೆ ಗಾಜಿನ ಗೂಡನ್ನು ಮಾಡಲಾಗಿದೆ. ಪಾರದರ್ಶಕ ಗೂಡಿನಲ್ಲಿ ಇಡಲಾದ ಪುಸ್ತಕಗಳು ಹಾಗೂ ಪತ್ರಿಕೆಗಳು ಸುಲಭವಾಗಿ ಗೋಚರಿಸುವುವು.
ಕಡಬ ತಾಲೂಕು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ನಿವಾಸ ನಾಯಕ ಇಂದಾಜೆ, ಹಿರಿಯ ಪತ್ರಕರ್ತರಾದ ಭಾಸ್ಕರ್ ರೈ, ಪುಷ್ಪರಾಜ್, ಕಡಬ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು ಹಾಗೂ ಇತರೆ ಗಣ್ಯರಿದ್ದರು.