ಉಡುಪಿ, ನ 21(SM): ನವೆಂಬರ್ ತಿಂಗಳ ಅಂತ್ಯದೊಳಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ಅ. 30ರಂದು ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ. ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಪ್ರಶಸ್ತಿ ನೀಡಲು ವಿಳಂಬವಾಗಿದೆ. ಇದೇ ೨೯ರಂದು ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಈ ತಿಂಗಳ ಅಂತ್ಯದೊಳಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ರಾಜ್ಯೋತ್ಸವ ಪ್ರಶಸ್ತಿಯ ಘನತೆ, ಗೌರವವನ್ನು ನಾವು ಯಾವತ್ತು ನೆಲಕ್ಕೆ ಹಾಕಿಲ್ಲ. ನಾವು ಹೇಳಿದಂತೆ ಪ್ರಶಸ್ತಿಯ ಘನತೆಯನ್ನು ಉಳಿಸುವ ಕೆಲಸ ಮಾಡಿದ್ದೇವೆ. ನ. ೨೮ರಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತೇವೆ.ಈಗಾಗಲೇ ಇದರ ಪರಿಶೀಲನೆ ಕೂಡ ಆಗಿದೆ. ಆಯ್ಕೆಗಳೆಲ್ಲವೂ ಕಾನೂನು ಬದ್ಧವಾಗಿ ನಡೆದಿದೆ ಎಂದು ಹೇಳಿದರು.
ರೈತರ ಸಮಸ್ಯೆ, ಸಂಕಷ್ಟ ಏನೆಂಬುವುದರ ಬಗ್ಗೆ ನಮಗೂ ಅರಿವಿದೆ. ರೈತರ ಸಮಸ್ಯೆ ಎಂದರೆ ನಮ್ಮ ಸಮಸ್ಯೆ ಇದ್ದಂತೆ. ಹಾಗಾಗಿ ರೈತರ ಸಮಸ್ಯೆ ಪರಿಹರಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.