ಬೈಂದೂರು, ನ 21(SM): ಶಿರೂರು ಜಿ.ಪಂ. ಸದಸ್ಯ ಸುರೇಶ್ ಬಟ್ವಾಡಿಯವರಿಗೆ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ದೌರ್ಜನ್ಯ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾರ್ವಜನಿಕವಾಗಿ ಜನಪ್ರತಿನಿಧಿಗಳನ್ನು ಈ ರೀತಿ ನಿಂಧಿಸಿದ ಠಾಣಾಧಿಕಾರಿಯನ್ನು ಮೇಲಾಧಿಕಾರಿಗಳು ವರ್ಗಾಯಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕ್ಷೇತ್ರ ಬಿಜೆಪಿ ವತಿಯಿಂದ ಬೈಂದೂರು ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಠಾಣಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಆಕ್ರಮಗಳ ಬಗ್ಗೆ ಏನೂ ಕ್ರಮಕೈಗೊಂಡಿಲ್ಲ. ಜನರ ಸಮಸ್ಯೆಗಳನ್ನು ಅರಿತು ಸ್ಪಂಧಿಸಲು ಬಂದ ಜಿ.ಪಂ ಸದಸ್ಯರ ಮೇಲೆ ಅಧಿಕಾರದ ದುರುಪಯೋಗ ಮಾಡಿ ದರ್ಪ ಮೆರೆದಿದ್ದಾರೆ. ಇದರ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದರು.
ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ ಮಾತನಾಡಿ ಜನಪ್ರತಿನಿಧಿಯಾದ ಮೇಲೆ ಜನರ ಸಮಸ್ಯೆಗಳಿಗೆ ಸ್ಪಂಧಿಸ ಬೇಕಾಗುತ್ತದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಚರ್ಚಿಸಲು ಠಾಣೆಗೆ ಹೋದಾಗ ಠಾಣಾಧಿಕಾರಿಗಳು ಕುತ್ತಿಗೆಗೆ ಕೈ ಹಾಕಿ ದೂಡಿದ್ದಲ್ಲದೆ. ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ನಮ್ಮಂಥವರಿಗೆ ಹೀಗಾದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು? ಹೀಗಾಗಿ ಮೇಲಾಧಿಕಾರಿಗಳು ಸಮರ್ಪಕವಾಗಿ ಸ್ಪಂಧಿಸಬೇಕು ಎಂದರು.