ಕುಂದಾಪುರ, ನ 21(SM): ಯಾವ ವ್ಯಕ್ತಿಯೂ ಕೂಡಾ ಹಸಿವಿನಿಂದ ಇರಬಾರದು ಎನ್ನುವ ನೆಲೆಯಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟಿನ್ ಇವತ್ತು ಯಶಸ್ವಿಯಾಗಿ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ 500 ಇಂದಿರಾ ಕ್ಯಾಂಟೀನ್ಗಳನ್ನು 3 ಲಕ್ಷ ಜನರಿಗೆ ನಿತ್ಯ ಹಸಿವು ನೀಗಿಸುವ ಯೋಚನೆ ಇತ್ತು. ಇವತ್ತು ರಾಜ್ಯದಲ್ಲಿ 1.40ಲಕ್ಷ ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲೆಗೆ ನಾಲ್ಕು ಇಂದಿರಾ ಕ್ಯಾಂಟಿನ್ ದೊರಕಿದ್ದು ಉಡುಪಿಯಲ್ಲಿ 2, ಕುಂದಾಪುರ, ಕಾರ್ಕಳದಲ್ಲಿ ತಲಾ 1 ಇಂದಿರಾ ಕ್ಯಾಂಟಿನ್ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.
ಅವರು ಕುಂದಾಪುರದ ಶಾಸ್ತ್ರೀ ಸರ್ಕಲ್ನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಯಶಸ್ಸಿನಿಂದ ಪ್ರೇರಿತರಾಗಿ ಮೊಬೈಲ್ ಇಂದಿರಾ ಕ್ಯಾಂಟೀನ್ ಆರಂಭಿಸುವ ಆಲೋಚನೆ ಹೊಂದಿದ್ದೇವೆ. ಸರ್ಕಾರಿ ಆಸ್ಪತ್ರೆಯ ಭಾಗದಲ್ಲಿ ಸಂಚಾರ ಇಂದಿರಾ ಕ್ಯಾಂಟೀನ್ ಕಾರ್ಯಾಚರಿಸಿದರೆ ರೋಗಿಗಳನ್ನು ನೋಡಲು ಬರುವವರಿಗೆ ಅನುಕೂಲವಾಗುತ್ತದೆ ಎಂದರು.
ಇಂದಿರಾ ಕ್ಯಾಂಟೀನ್ನಲ್ಲಿ 10 ರೂಪಾಯಿಗೆ ಊಟ, 5 ರೂಪಾಯಿ ಬೆಳಿಗ್ಗೆಯ ತಿಂಡಿ ದೊರೆಯುತ್ತದೆ. ಅತ್ಯುತ್ತಮ ಗುಣಮಟ್ಟ, ಶುಚಿ ರುಚಿಯ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತದೆ. ಹಸಿದವರಿಗೆ ಎರಡು ಹೊತ್ತಿನ ಊಟ ಹಾಗೂ ತಿಂಡಿಯನ್ನು ನೀಡುವುದರ ಜೊತೆಗೆ ಉದ್ಯೋಗವಕಾಶಗಳು ಇಲ್ಲಿ ಸೃಷ್ಟಿಯಾಗುತ್ತವೆ ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡಾ ಬಡವರ, ಕಾರ್ಮಿಕರ ಪರವಾದ ಕಳಕಳಿ ಹೊಂದಿದ್ದವರು. ಅವರು ಬಡವರಿಗಾಗಿ ಹಲವಾರು ಯೋಜನೆಗಳನ್ನು ಆರಂಭಿಸಿದ್ದರು. ಯಾರೂ ಕೂಡಾ ಹಸಿವಿನಿಂದ ಇರಬಾರದು ಎನ್ನುವ ಚಿಂತನೆ ಅವರು ಹೊಂದಿದ್ದರು. ಆ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಇವತ್ತು ಯಶಸ್ವಿಯಾಗಿ ನಡೆಯುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಟಿ.ಭೂಬಾಲನ್, ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೆಕರ್ ಉಪಸ್ಥಿತರಿದ್ದರು.