ಮಂಗಳೂರು, ನ. 17 (DaijiworldNews/SM): ಎಂಆರ್ ಪಿಎಲ್ ಸಂಸ್ಥೆಯ ನಿರ್ದೇಶಕರ ನಕಲಿ ಇ-ಮೇಲ್ ಐಡಿ ಮಾಡಿ ಆ ಮೂಲಕ ಸಿಬ್ಬಂದಿಗಳಿಗೆ ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಕಲಿ ಐಡಿ ಮಾಡಿರುವ ಕಿಡಿಗೇಡಿ ಸಂಸ್ಥೆಯ ೩೫೦ಕ್ಕೂ ಅಧಿಕ ಸಿಬ್ಬಂದಿಗಳಿಗೆ ಫೇಕ್ ಇ ಮೇಲ್ ರವಾನೆ ಮಾಡಿದ್ದಾನೆ. ವ್ಯವಸ್ಥಾಪಕ ನಿರ್ದೇಶಕ ಎಂ ವೆಂಕಟೇಶ್ ಅವರ ಹೆಸರಿನ edirector@gmail.com ನಕಲಿ ಇ-ಮೇಲ್ ಐಡಿ ಮಾಡಿ ವಂಚಿಸಲು ಯತ್ನಿಸಲಾಗಿದೆ.
ಸಿಬ್ಬಂದಿಗಳಿಗೆ ತಮ್ಮ ವಾಟ್ಸಾಪ್ ನಂಬರ್ ಕಳುಹಿಸುವಂತೆ ಮೇಲ್ ಮಾಡಲಾಗಿದೆ. ನಿರ್ದೇಶಕರ ನಕಲಿ ಇ-ಮೇಲ್ ಐಡಿ ಮೂಲಕ ಸಂದೇಶ ರವಾನೆ ಮಾಡಲಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸಂಸ್ಥೆಯ ೧೪೧ಕ್ಕೂ ಅಧಿಕ ಸಿಬ್ಬಂದಿಗಳಿಂದ ಪ್ರತಿಕ್ರಿಯೆ ಸಿಕ್ಕಿದ್ದು, ಓರ್ವ ಸಿಬ್ಬಂದಿ ನೇರವಾಗಿ ನಿರ್ದೇಶಕರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾನೆ. ಈ ವೇಳೆ ನಕಲಿ ಇ-ಮೇಲ್ ಐಡಿ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.
ಆರೋಪಿ ತನ್ನ ವಾಟ್ಸ್ ಆಪ್ ಡಿಪಿಯಲ್ಲೂ ನಿರ್ದೇಶಕರ ಫೊಟೋ ಬಳಕೆ ಮಾಡಿದ್ದಾನೆ. ವೆಂಕಟೇಶ್ ಅವರ ಭಾವಚಿತ್ರ ಬಳಸಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.