ಮಂಗಳೂರು,ನ 21(MSP): ತುಳುನಾಡಿನ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಾಧನೆ ಮಾಡಿದ್ದ, ಕಳೆದ 15 ವರ್ಷಗಳಿಂದ ಅನಭಿಷಿಕ್ತ ದೊರೆಯಾಗಿದ್ದ, ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ. ತನ್ನ ಚಿಗರೆಯ ಓಟದ ವೈಖರಿಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ, ರಾಕೆಟ್ ಮೋಡ ಅಭಿಮಾನಿಗಳ ಹೃದಯವನ್ನು ಆರ್ದ್ರಗೊಳಿಸಿ ಬಾರದ ಲೋಕಕ್ಕೆ ಹೊರಟಿದ್ದಾನೆ.
ಅಧುನಿಕ ಕಂಬಳಕ್ಕೆ ವಿಶಿಷ್ಟ ಕೊಡುಗೆ ನೀಡದ ನಂದಳಿಕೆ ಶ್ರೀಕಾಂತ್ ಭಟ್ ಅವರ ಪ್ರೀತಿಯ, 20 ವರ್ಷದ ಕಂಬಳ ಕೋಣ ರಾಕೆಟ್ ಮೋಡವಯೋಸಹಜ ಕಾಯಿಲೆಯಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದಾನೆ. ಉಡುಪಿ ಕೋಟದ ಪೈರು ತಳಿ ಆಗಿರುವ ರಾಕೆಟ್ ಮೋಡ 2014 ರಲ್ಲಿ ತನ್ನ ಜತೆಗಾರ ಕುಟ್ಟಿಯೊಂದಿಗೆ 144 ಮೀ ನ್ನು 13.57 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ಕಂಬಳ ಇತಿಹಾಸದಲ್ಲಿ ಇನ್ನು ಅಳಿಸಲಾಗದ ದಾಖಲೆ ಸೃಷ್ಟಿಸಿದ್ದಾನೆ. ರಾಕೆಟ್ ಈವರೆಗೆ 100ಕ್ಕೂ ಅಧಿಕ ಪದಕ ಪದೆದಿದ್ದು ಕಂಬಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆ ಮಾಡಿದ ಕೀರ್ತಿ ಪಡೆದಿದ್ದಾನೆ.
ಮಿಂಚಿನ ಓಟದ ಸರದಾರ ತನ್ನ ಕೊನೆಯ ಉಸಿರ ಚೆಲ್ಲಿ ಮಂಗಳವಾರ ಹಟ್ತಿಯಲ್ಲಿ ಅಂಗಾತ ಬಿದ್ದಿರುವುದನ್ನು ಕಂಡು ಆತನ ಜತೆಗಾರಾಗಿದ್ದ ಕುಟ್ಟಿ ಮತ್ತು ಚೆನ್ನ ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿತ್ತು. ಈತನ ಸಾವಿನ ಸುದ್ದಿ ಹರಿದಾಡುತ್ತಿದ್ದಂತೆ ಕಂಬಾಳಾಭಿಮಾನಿಗಳು , ಕಂಬಳ ಯಜಮಾನರು, ಊರವರ ದಂಡೇ ಶ್ರೀಕಾಂತ್ ಭಟ್ ಅವರ ಮನೆಗೆ ಆಗಮಿಸಿ ರಾಕೆಟ್ ಮೋಡದ ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಕಂಬನಿ ಮಿಡಿದರು.