"ಪುಟ್ಟಗೌರಿ ಮದುವೆ" ಧಾರವಾಹಿಯ ವೀಕ್ಷಕರ ತಾಳ್ಮೆ ಕಟ್ಟೆ ಒಡೆದಂತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ 'ಪುಟ್ಟಗೌರಿ ಮದುವೆ' ಬಗ್ಗೆ ವೀಕ್ಷಕರು ಪೋಸ್ಟ್ ಮಾಡುತ್ತಿರುವ ಕಾಮೆಂಟ್ ಗಳು ಇದಕ್ಕೆ ಸಾಕ್ಷಿಯಾಗಿದೆ. ಕಿರುತೆರೆಯಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯ 'ಪುಟ್ಟಗೌರಿ ಮದುವೆ' ಕೂಡ ಒಂದು. ಧಾರವಾಹಿಯಲ್ಲಿ ಅತಿರೇಕ ಎನ್ನಿಸುವಂತ ದೃಶ್ಯಗಳು ಪ್ರಸಾರವಾಗುತ್ತಿದ್ದು ವೀಕ್ಷಕರು ಇವುಗಳ ಬಗ್ಗೆ ವ್ಯಂಗ್ಯವಾಡಲು ಪ್ರಾರಂಭಿಸಿದ್ದಾರೆ. ಬೆಟ್ಟದ ಮೇಲಿಂದ ಬಿದ್ದ ಗೌರಿ ಸಾವನ್ನಪ್ಪದೆ ಬದುಕುಳಿಯುವುದು, ಗೌರಿಯನ್ನು ನೋಡಿ ಹಾವು ಕಚ್ಚದೆ ಸುಮ್ಮನೆ ಹೋಗುವುದು, ಕಾಡು ಮನುಷ್ಯರ ಕೈಗೆ ಸಿಕ್ಕಿಬಿದ್ದರು ಬದುಕುಳಿಯುವುದು, ತಿನ್ನಲು ಬಂದ ಹುಲಿಯೂ ತಿರುಗಿ ಹೋಗೋದು, ಕ್ಯಾನ್ಸರ್ ಬಂದರೂ ಸಾಯದೇ ಇರೋದು' ಪ್ರಾಣಕ್ಕೆ ಮತ್ತೆ ಅಪಾಯವಾದರೂ ಗೌರಿ ಬದುಕುಳಿಯುವುದು , ಕಾಡಿನಲ್ಲಿ ತಿಂಗಳಾನುಗಟ್ಟಲೆ ತಿರುಗಿದರೂ ಮುಡಿದ ಹೂವೂ ಬಾಡದೇ ಇರೋದು ಇವೆಲ್ಲಾ ದೃಶ್ಯಗಳ ಬಗ್ಗೆ ತರಾವರಿ ಜೋಕ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸಿದೆ.