ಬೆಂಗಳೂರು, ನ 20(SM):ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಡೆಸಿದ ಕಬ್ಬಿನ ಬಿಲ್ ಬಾಕಿ ಕುರಿತ ಸಭೆ ಯಶಸ್ವಿಯಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾನು ಮಾತನಾಡಿದೇ ಅಂತ ಪ್ರತಿಭಟನೆ ನಡೆಸಲಾಗುತ್ತಿದೆ. ಅಂತಹ ಯಾವ ಮಾತುಗಳನ್ನು ನಾನು ಆಡಿದ್ದೇನೆ ಎಂದು ಅವರು ಪ್ರಶ್ನಿಸಿದ್ದಾರೆ.
ಇವತ್ತಿನ ಸಭೆಗೆ ರೈತರ ಮುಖಂಡರನ್ನು ಕರೆದು ಸುದೀರ್ಘವಾಗಿ ಮಾತನಾಡಿದ್ದೇನೆ. ಬೆಳಗ್ಗಿನಿಂದಲೂ ಮಾಧ್ಯಮಗಳಲ್ಲಿ ಕಬ್ಬು ಬೆಳಗಾರರಿಗೆ ಕಹಿಯೋ, ಸಿಹಿಯೋ ಅಂತ ಸುದ್ದಿ ಮಾಡಿದ್ದೀರಿ. ಆದರೂ ರೈತರು ಸರ್ಕಾರದ ಕೆಲವು ಸಲಹೆಗೆ ಒಪ್ಪಿಗೆ ನೀಡಿದ್ದಾರೆ. ನಾನು ರೈತರಿಗೆ ಅಭಾರಿಯಾಗಿದ್ದೇನೆಂದರು.
ತಮ್ಮ 13 ಸಮಸ್ಯೆಗಳ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ಇಳುವರಿಯಲ್ಲಿ ಕಡಿಮೆ ತೋರಿಸುವುದು, ತೂಕ ಕಡಿಮೆ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇಳುವಾರಿ ಸರಿಯಾಗಿ ತೋರಿಸಲು ಹೊಸ ಯಂತ್ರ ಖರೀದಿಗೆ ಸೂಚನೆ ನೀಡಿದ್ದೇನೆ. ಎಫ್ಆರ್ಪಿ ದರವನ್ನೇ ಮಾಲೀಕರಿಗೆ ನೀಡಲು ಸೂಚನೆ ನೀಡಲಾಗಿದೆ. ದರ ನಿಗದಿ ಬಗ್ಗೆ ಆಯುಕ್ತರಿಗೆ ಅಧಿಕಾರ ನೀಡಿದ್ದೇನೆ. ಈ ಬಗ್ಗೆ ಮಾಲೀಕರ ಜೊತೆ ಚರ್ಚೆ ಮಾಡಿ ದರ ನಿಗದಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದು ರೈತರ ಅಂತಿಮ ಸಭೆ ಅಲ್ಲ. ಹಂತ ಹಂತವಾಗಿ ಸಭೆ ಮಾಡುತ್ತೀನಿ. ಅಗತ್ಯ ಸಮಯದಲ್ಲಿ ಸಭೆಯನ್ನು ಕರೆಯುತ್ತೇನೆ. ರೈತ ಮುಖಂಡರು ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಅವರಿಗಾಗಿ ಮುಕ್ತ ಅವಕಾಶ ನೀಡಿದ್ದೇನೆ. ಕಳೆದ ವರ್ಷದ ಕಬ್ಬು ಮೊತ್ತ ಬಿಡುಗಡೆ ಮಾಡಲು, ಅಧಿಕಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಮಾಲೀಕರಿಗೂ ಸಹ ಈ ಬಗ್ಗೆ ಸೂಚನೆ ನೀಡಿ, ಎಲ್ಲಾ ಹಣವನ್ನು ನೀಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.