ಉಡುಪಿ, ನ 20(SM): ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ವಿರುದ್ಧ ನೀಡಿದ ಹೇಳಿಕೆಯನ್ನು ಬಿಜೆಪಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ. ಅಲ್ಲದೆ ರಾಜ್ಯದ ರೈತರಲ್ಲಿ ಬಹಿರಂಗ ಕ್ಷಮೆಯಾಚಿಸುವಂತೆ ವಿನಂತಿಸಿದ್ದಾರೆ.
ಈ ದೇಶದ ಈ ರಾಜ್ಯದ ಹಿರಿಯರಾದ ಮಣ್ಣಿನ ಮಗ ದೇವಗೌಡರಲ್ಲಿ ನಾನು ವಿನಂತಿ ಮಾಡುತ್ತೇನೆ. ಮಗ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸ್ವಲ್ಪ ತಿಳುವಳಿಕೆ ಹೇಳಬೇಕಾದ ಅವಶ್ಯಕತೆ ಇದೆ. ರಾಜ್ಯದ ಮುಖ್ಯಮಂತ್ರಿಯಾಗಲು ಅಧಿಕಾರ ಸಿಕ್ಕಿದ ನಂತರ ಎಲ್ಲ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅಧಿಕಾರ ನಡೆಸಬೇಕಾಗಿದೆ. ಮಹಿಳೆಗೆ ಅಪಮಾನಕರವಾಗಿ ಮಾತುಗಳನ್ನಾಡುತ್ತಾರೆ. ರೈತರನ್ನು ಗೂಂಡಾಗಳು ಎಂದಾದರೆ ನಾನು ಕ್ಷಮೆ ಕೇಳಬೇಕಾದರೆ ಕೇಳುತ್ತೇನೆ ಎನ್ನುವ ವ್ಯಂಗ್ಯದ ಮಾತುಗಳು ಬೇಕಾಗಿಲ್ಲ ಎಂದರು.
ಕರ್ನಾಟಕದ ಮುಖ್ಯಮಂತ್ರಿ ಯಾಗಿ ನೀವು ತಪ್ಪು ಹೆಜ್ಜೆ ಇಟ್ಟಿದ್ದಿರಿ. ತಕ್ಷಣ ಬೇಷರತ್ತಾಗಿ ನನ್ನಿಂದ ಪ್ರಮಾದವಾಗಿದೆ ಎಂದು ಕ್ಷಮೆ ಕೇಳಬೇಕು. ಕೇಂದ್ರ ಸರಕಾರ ಕಬ್ಬು ನಿಯಂತ್ರಣ ಮಂಡಳಿಯ ಒಂದು ಆದೇಶವಿದೆ. ಕಬ್ಬು ಹಾಕಿದ 14 ದಿನಗಳ ಒಳಗೆ ಕಬ್ಬಿನ ಕಾರ್ಖಾನೆಯವರು ಸೂಕ್ತ ಬೆಲೆಯನ್ನು ರೈತರಿಗೆ ನೀಡಬೇಕು. ಅದರ ಮೇಲುಸ್ತುವಾರಿ ರಾಜ್ಯ ಸರಕಾರ ನೋಡಿಕೊಳ್ಳಬೇಕು. ಸಕಾಲದಲ್ಲಿ ಕೊಡಲು ಸಾಧ್ಯವಾಗದೆ ಇದ್ದರೆ, 15% ಬಡ್ಡಿ ನೀಡಬೇಕು. ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ನೀವು ನೀಡಿಲ್ಲಾ, ಅವರ ಬಾಕಿ ಪಾವತಿ ಮಾಡಿಲ್ಲ ಎಂದರು.
ರೈತರಿಗೆ ಕೂಡಲೇ ಬೆಂಬಲ ಬೆಲೆ ಮತ್ತು ಕಬ್ಬಿನ ಬೆಲೆಯನ್ನು ಕೊಡುವಂತಾ ಆದೇಶ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.