ಕಾಸರಗೋಡು, ಅ 15 : ಇಲ್ಲಿನ ಕುಂಬಳೆ ಸೀಮೆಯ ಮುಜಂಗಾವು ಶ್ರೀ ಪಾರ್ಥಸಾರಥಿ ದೇವಾಲಯದಲ್ಲಿ ಕಾವೇರಿ ತೀರ್ಥಸ್ನಾನ ಅ.17 ರಂದು ನಡೆಯಲಿದ್ದು ಇದಕ್ಕಾಗಿ ಭರದ ತಯಾರಿ ಸಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕಾವೇರಿ ತೀರ್ಥ ಸರೋವರದಲ್ಲಿ ಅನಾದಿ ಕಾಲದಿಂದ ನಡೆದುಬಂದಂತೆ ತುಲಾ ಸಂಕ್ರಮಣದ ಪರ್ವಕಾಲದಲ್ಲಿ ಅಕ್ಟೊಬರ್17 ರಂದು ಮುಂಜಾನೆ 3.30 ಕ್ಕೆ ಶ್ರೀ ಕ್ಷೇತ್ರದ ತಂತ್ರಿ ವರ್ಯರಿಂದ ಕಾವೇರಿ ಮಾತೆಯನ್ನು ಪೂಜಿಸಿ , ರಜತ ಕಲಶದಲ್ಲಿ ತೀರ್ಥವನ್ನು ವೇದಮಂತ್ರ ಹಾಗೂ ವಾದ್ಯ ಘೋಷ ದೊಂದಿಗೆ ಶ್ರೀ ಕ್ಷೇತ್ರಕ್ಕೆ , ತಂದು ಶ್ರೀ ಪಾರ್ಥಸಾರಥಿ ದೇವರಿಗೆ ಕಲಶಾಭಿಷೇಕ ನಡೆಸಲಿದ್ದು , ಬಳಿಕ ಸಾಮೂಹಿಕ ತೀರ್ಥ ಸ್ನಾನ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ.
ಇಲ್ಲಿನ ದೇವಾಲಯದ ಮುಂದಿರುವ ಕೆರೆಯ ನೀರು ಕಾವೇರಿ ತೀರ್ಥಕ್ಕೆ ಸಮ, ಹೀಗಾಗಿ ಇಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ಗುಣವಾಗುತ್ತವೆ ಎಂಬ ನಂಬಿಕೆಯಿದೆ.ಕಡು ಬೇಸಿಗೆಯಲ್ಲೂ ಬತ್ತದ ಈ ಜಲದ ಮೂಲ ಭಾಗಮಂಡಲದ ತಲಕಾವೇರಿ ಎಂಬುದು ಜನರ ನಂಬಿಕೆ. ಅದಕ್ಕಾಗಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ನಡೆಯುವ ತೀರ್ಥಸ್ನಾನದಲ್ಲಿ ಐವತ್ತು ಸಾವಿರಕ್ಕೂ ಮೇಲ್ಪಟ್ಟು ಜನರು ಭಾಗವಹಿಸುತ್ತಾರೆ. ಕರ್ನಾಟಕಕ್ಕೆ ಹೊಂದಿಕೊಂಡೇ ಇರುವುದರಿಂದ ಕನ್ನಡಿಗ ಭಕ್ತರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋದು ವಾಡಿಕೆ.
ತೀರ್ಥಸ್ನಾನ ಮಾಡುವ ಭಕ್ತಾದಿಗಳು ಮೊದಲು ಮನೆಯಲ್ಲಿ ಸ್ನಾನಮಾಡಿ ಶುಚಿರ್ಭೂತರಾಗಿ ಬಂದು ಒಂದು ಮುಷ್ಟಿ ಅಕ್ಕಿ ಮತ್ತು ಹುರುಳಿಯನ್ನು ಹಿಡಿದುಕೊಂಡು ಕೆರೆಗೆ ಸಮರ್ಪಿಸಬೇಕು. ಅನಂತರ ಪೂರ್ವಾಭಿಮುಖವಾಗಿ 3 ಬಾರಿ ಮುಳುಗಿ ಏಳಬೇಕು, ಮತ್ತೆ ಒಂದು ಮುಷ್ಟಿ ಅಕ್ಕಿ, ಹುರುಳಿಯನ್ನು ಸ್ವಲ್ಪ ಸ್ವಲ್ಪವೇ ಕೆರೆಗೆ ಅರ್ಪಿಸುತ್ತಾ 3 ಪ್ರದಕ್ಷಿಣೆ ಬರಬೇಕು. ಬಳಿಕ ಉಳಿದ ಅಕ್ಕಿ, ಹುರುಳಿ ಮಿಶ್ರಣವನ್ನು ದೇಗುಲದ ಮುಂಭಾಗದ ಕೊಪ್ಪರಿಗೆಯಲ್ಲಿ ಹಾಕಬೇಕು ಎನ್ನುವ ಅಲಿಖಿತ ನಿಯಮವೂ ಚಾಲ್ತಿಯಲ್ಲಿದೆ.