ಉಡುಪಿ, ನ. 12 (DaijiworldNews/SM): ಮಲ್ಪೆ ಬೀಚ್ ಗೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ನಿತ್ಯ ಆಗಮಿಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಮೊದಲು ಪ್ರವಾಸಿಗರ ಸಂಖ್ಯೆ ಬಹಳಷ್ಟು ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಬೀಚ್ ಸ್ವಚ್ಚತೆಗೆ ಬೀಚ್ ಕ್ಲೀನಿಂಗ್ ಯಂತ್ರ ಆರಂಭಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕ್ಲೀನಿಂಗ್ ಯಂತ್ರದ ಟ್ರ್ಯಾಕ್ಟರ್ ಕಳೆದ ಏಳು ತಿಂಗಳಿಂದ ಕೆಲಸಕ್ಕೆ ಬಾರದೆ ಮೂಲೆ ಗುಂಪಾಗಿದೆ.
ಕಳೆದ ಎಪ್ರಿಲ್ ಒಂದರಂದು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ, ಟ್ರ್ಯಾಕ್ಟರ್ ಸುಟ್ಟು ಹೋಗಿ ರಿಪೇರಿ ಮಾಡಲು ಬಾರದ ಸ್ಥಿತಿಯಾಗಿತ್ತು. ಹಾಗಾಗಿ ಈಗ ಬೀಚ್ ಸ್ವಚ್ಚತೆ ಮಾಡಲು ಕಾರ್ಮಿಕರನ್ನೇ ಬಳಸಿಕೊಂಡು ಮಾಡಲಾಗುತ್ತಿದೆ. ಮತ್ತೆದೇ ಹಳೆಯ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ಆದರೆ, ಬದಲಿ ಯಂತ್ರ ಬಳಸಿ ಸ್ವಚ್ಛತೆ ಮಾಡಲು ಇಲಾಖೆ, ಆಡಳಿತ ವರ್ಗ ಮುಂದಾಗಿಲ್ಲ.
ಟ್ಯಾಕ್ಟರ್ ಬಳಸುವ ವೇಳೆ ಮರಳಿನಲ್ಲಿ ಹೂತಿರುವ ಕಸ ಸುಲಭವಾಗಿ ತೆಗೆಯಲಾಗುತ್ತಿತ್ತು. ನಿರೀಕ್ಷಿತ ಸ್ವಚ್ಛತೆ ನಡೆಸಲು ಸಾಧ್ಯವಾಗುತ್ತಿತ್ತು. ಆದರೆ ರಿಪೇರಿಗೆ ಬಾರದಷ್ಟು ಟ್ರ್ಯಾಕ್ಟರ್ ಭಾಗಗಳು ಸುಟ್ಟು ಹೋಗಿವೆ. ಅದರ ಬಿಡಿ ಭಾಗಗಳು ಸ್ಥಳಿಯವಾಗಿ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ಆಡಳಿತ ವರ್ಗ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನು ನೂತನ ಯಂತ್ರ ಅಳವಡಿಸಿ ಎನ್ನುವ ಆಗ್ರಹಗಳು ಕೂಡ ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಉಡುಪಿಯ ಮಲ್ಪೆ ಬೀಚ್ ಎಂದರೆ ದೇಶ ವಿಧೇಶಗಳಿಂದ ಪ್ರವಾಸಿಗರು ಬರುತ್ತಾರೆ. ಲಾಕ್ ಡೌನ್ ಸಂದರ್ಭದಲ್ಲಿ ಬ್ರೇಕ್ ಬಿದ್ದಿದ್ದರೂ, ಲಾಕ್ಡೌನ್ ತೆರವುಗೊಳಿಸದ ನಂತರ ಮಲ್ಪೆ ಬೀಚ್ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೀಚ್ ಸ್ವಚ್ಚವಾಗಿಡುವ ಉದ್ದೇಶದಿಂದ 2016ರಲ್ಲಿ ಅಂದಿನ ಶಾಸಕರಾದ ಪ್ರಮೋದ್ ಮಧ್ವರಾಜ್ ಅವಧಿಯಲ್ಲಿ, ಮುಖ್ಯಮಂತ್ರಿ ಚಾಲೆಂಜ್ ಫಂಡ್ನಿಂದ 75 ಲಕ್ಷ ರೂ. ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನದ ಬೀಚ್ ಟೆಕ್- 2000 ಅತ್ಯಾಧುನಿಕ ಯಂತ್ರ ಖರೀದಿಸಲಾಗಿತ್ತು. ಕೇವಲ ಮಲ್ಪೆ ಬೀಚ್ ಅಲ್ಲದೆ ಹತ್ತಿರದ ಪಡುಕೆರೆ, ಪಡುಬಿದ್ರಿಗೂ ಸ್ವಚ್ಚತೆಗೆ ಕಳುಹಿಸಲಾಗಿತ್ತು. ಎಪ್ರಿಲ್ ತಿಂಗಳಲ್ಲಿ ಟ್ಯಾಕ್ಟರ್ ಸುಟ್ಟು ಹೋದ ನಂತರ ಮೂಲೆಗೆ ಸೇರಿದೆ.
"ಟೆಂಡರ್ ಪ್ರಕ್ರಿಯೆ 75% ಮುಗಿದಿದೆ. ಟೆಂಡರ್ ಆಗಿ, ವರ್ಕ್ ಆರ್ಡರ್ ಕೊಟ್ಟ್ರೆ, 25 ದಿನದೊಳಗೆ ಟ್ರ್ಯಕ್ಟರ್ ಬರುತ್ತದೆ. ಅದರ ಬಿಡಿ ಭಾಗಗಳು ಸುಟ್ಟು ಹೋಗಿರುವುದರಿಂದ ರಿಪೇರಿಗೆ ಬಾರದೆ ಮತ್ತೆ ಕಂಪನಿಗೆ ಕಳುಹಿಸಬೇಕು. ರಿಪೇರಿಗೆ ಅಧಿಕೃತ ಕಂಪನಿಯಿಂದ 9,06,207 ರೂ. ಅಂದಾಜು ಖರ್ಚು ತಿಳಿಸಲಾಗಿದೆ. ಅದರ ಹೈಡ್ರೋಲಿಕ್ ಕೇಬಲ್ ಕೂಡ ಸುಟ್ಟು ಹೋಗಿದೆ. ಬೇರೆ ಟ್ರ್ಯಾಕ್ಟರ್ಗಳಿಗೆ ಅದನ್ನು ಜೋಡಿಸುವಂತಿಲ್ಲ. 75 ಹೆಚ್ ಪಿ ಸಾಮರ್ಥ್ಯದ್ದೇ ಬೇಕಾಗಿದೆ. ಸ್ಥಳೀಯವಾಗಿ ಅದರ ಲಭ್ಯತೆ ಇಲ್ಲ. ಸರ್ವೆ, ಇನ್ಸೂರೆನ್ಸ್ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದು, ಎಲ್ಲಾ ಪ್ರಕ್ರಿಯೆ ಮುಗಿದು ವಾಹನ ನಮಗೆ ಸಿಗುವುದಕ್ಕೆ ಒಂದು ತಿಂಗಳಾಗುತ್ತದೆ ಎಂದು ಅಧಿಕೃತವಾದ ಮೂಲಗಳು ತಿಳಿಸಿವೆ.
ನವೆಂಬರ್ ತಿಂಗಳಲ್ಲಿ ಹೊಸ ಟ್ರ್ಯಾಕ್ಟರ್ ಖರೀದಿಗೆ 12.5 ಲಕ್ಷ ರೂ. ಮೊತ್ತಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ಕೊರೊನಾದಿಂದ ಹೊಸ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ಸದ್ಯ ಸ್ವಚ್ಚತೆಯನ್ನು ಕಾರ್ಮಿಕರನ್ನು ಬಳಸಿಕೊಂಡೇ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ಮತ್ತೆ ಯಂತ್ರ ಕಾರ್ಯಾರಂಭ ಮಾಡಲಿ ಎಂಬುವುದು ಆಶಯವಾಗಿದೆ.