ಮಂಗಳೂರು,ನ 20(MSP): ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಉದ್ಘಾಟನೆ ಕಾರ್ಯಕ್ರಮ ನ. 25ರಂದು ನಡೆಯಲಿದೆ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ತಿಳಿಸಿದ್ದಾರೆ.
ನಗರದ ಸರ್ಕಿಟ್ಯೂ ಹೌಸ್ ನಲ್ಲಿ ನ.20 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಚಿವ ಖಾದರ್ , ಈ ಎರಡು ತಾಲೂಕುಗಳನ್ನು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಉದ್ಘಾಟಿಸಲಿದ್ದಾರೆ ಎಂದರು.
ಕಡಬ ತಾಲೂಕು ಪುತ್ತೂರು ತಾಲೂಕಿನ 9 ಗ್ರಾಮ ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಒಳಗೊಂಡಿದ್ದು ನ. 25ರಂದು 9 ಗಂಟೆಗೆ ಕಡಬ ತಾಲೂಕಿಗೆ ಚಾಲನೆ ನೀಡಲಿದ್ದಾರೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಮೂಡುಬಿದಿರೆ ತಾಲೂಕನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಕಳೆದ ಹಲವು ದಶಕಗಳ ಬೇಡಿಕೆಯಂತೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರವು 43 ತಾಲೂಕುಗಳ ಜೊತೆಗೆ ಜಿಲ್ಲೆಯ ಕಡಬ ಹಾಗೂ ಮೂಡುಬಿದಿರೆಯನ್ನು ನೂತನ ತಾಲೂಕಾಗಿ ಘೋಷಿಸಿತ್ತು. ತದನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿತ್ತು. ಆದರೆ ಉದ್ಘಾಟನಾ ಭಾಗ್ಯಕ್ಕೆ ಹಲವು ದಿನಾಂಕಗಳನ್ನು ಘೋಷಣೆ ಮಾಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದಾಗಿ ಕೊನೆಯ ಕ್ಷಣಗಳಲ್ಲಿ ರದ್ದಾಗುವ ಮೂಲಕ ನೂತನ ಕಡಬ ತಾಲೂಕಿನ ಕನಸು ಕನಸಾಗಿಯೇ ಉಳಿದಿತ್ತು.