ಉಡುಪಿ, ನ12 (DaijiworldNews/MS): ಯತಿಶ್ರೇಷ್ಠ ವಿಶ್ವೇಶತೀರ್ಥ ಶ್ರೀಗಳಿಗೆ ಸಂದ 'ಪದ್ಮವಿಭೂಷಣ ಪ್ರಶಸ್ತಿ' ಸ್ವಾಗತ ಸಮಾರಂಭದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕ ಪ್ರಮೋದ್ ಮದ್ವರಾಜ್ ಗುಣಗಾನ ಮಾಡಿದ್ದಾರೆ.
"ಈ ಹಿಂದೆ ಅರ್ಜಿ ಹಾಕಿದವರಿಗಷ್ಟೆ ಪ್ರಶಸ್ತಿಗಳು ಸಿಗುತ್ತಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪ್ರಶಸ್ತಿಗಳು ಅರ್ಹರನ್ನು ಹುಡುಕಿಕೊಂಡು ಬರುತ್ತಿದೆ.ಗುಣಕ್ಕೆ ಮತ್ಸರ ಇಲ್ಲ . ನಾನು ವಿರೋಧ ಪಕ್ಷದಲ್ಲಿದ್ದರೂ ಆಡಳಿತ ಪಕ್ಷ ಉತ್ತಮ ಕಾರ್ಯಗಳನ್ನು ಮಾಡಿದಾಗ ಶ್ಲಾಘಿಸಬೇಕಿರುವುದು ಕರ್ತವ್ಯ " ಎಂದು ಹೇಳಿ ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ನೆರೆದಿದ್ದ ಎಲ್ಲರನ್ನೂ ಚಕಿತಗೊಳಿಸಿದರು.
ಪ್ರಮೋದ್ ಮಧ್ವರಾಜ್ ಮಾತಿಗೆ ಸಭಿಕರು ಕರತಾಡನದ ಮೂಲಕ ಮೆಚ್ಚಿಗೆ ಸೂಚಿಸಿದರು. ವಿಶ್ವೇಶತೀರ್ಥ ಸ್ವಾಮೀಜಿಗೆ ನಿರ್ಯಾಣೋತ್ತರವಾಗಿ ನೀಡಿದ 'ಪದ್ಮವಿಭೂಷಣ' ಪ್ರಶಸ್ತಿಯನ್ನು ಗುರುಗಳ ಪರವಾಗಿ ಸ್ವೀಕರಿಸಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಗುರುವಾರ ಭಕ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದರು. ಬಳಿಕ ಹಿರಿಯ ಶ್ರೀಗಳ ಕುರಿತು ಹಾಗೂ ಪ್ರಶಸ್ತಿ ಸ್ವಾಗತ ಸಮಾರಂಭದ ಏರ್ಪಡಿಸಲಾಗಿತ್ತು.