ಮಂಗಳೂರು, ನ. 12 (DaijiworlNews/HR): ಸೌದಿ ಅರೇಬಿಯಾದಲ್ಲಿ ತನ್ನ ಪತಿಯನ್ನು ಅಧಿಕಾರಿಗಳು ಬಂಧಿಸಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಮಹಿಳೆಯೊಬ್ಬರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸೌದಿ ಅರೇಬಿಯಾದ ದೊರೆ ಮತ್ತು ಇಸ್ಲಾಂ ವಿರುದ್ಧ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಅಲ್ಲಿ ಕೆಲಸದಲ್ಲಿದ್ದ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕುಮಾರ್ ಅವರನ್ನು ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿಡಲಾಗಿದೆ.
ಕಳೆದ 20ವರ್ಷಗಳಿಂದ ಸೌದಿಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಶೈಲೇಶ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಅದರಲ್ಲಿ ಇಸ್ಲಾಂಗೆ ವಿರುದ್ಧವಾಗಿ ಮತ್ತು ಸೌದಿ ದೊರೆಗೆ ಅವಹೇಳನ ಮಾಡುವ ಪೋಸ್ಟ್ಗಳನ್ನು ಯಾರೋ ಹಾಕಿದ್ದು, ಫೇಸ್ಬುಕ್ನಲ್ಲಿ ನಕಲಿ ಐಡಿ ಸೃಷ್ಟಿಸುವ ಕೆಲವು ದಿನಗಳ ಮೊದಲು ವ್ಯಕ್ತಿಯೋರ್ವ ಕರೆ ಮಾಡಿ ನಿನ್ನ ಫೇಸ್ಬುಕ್ ಖಾತೆಯನ್ನು ಕೂಡಲೇ ಅಳಿಸಿ ಹಾಕಬೇಕು. ಇಲ್ಲವಾದಲ್ಲಿ ನಿನ್ನನ್ನು ಸೌದಿಯಲ್ಲಿ ಉಳಿಯಲು ಬಿಡುವುದಿಲ್ಲ. ಅಲ್ಲೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ. ಬೆದರಿದ ಶೈಲೇಶ್ ಕೂಡಲೇ ತನ್ನ ಫೇಸ್ಬುಕ್ ಖಾತೆಯನ್ನು ಅಳಿಸಿ ಹಾಕಿದ್ದರು. ಅದಾದ ಬಳಿಕ ಕೆಲವೇ ದಿನಗಳಲ್ಲಿ ನಕಲಿ ಖಾತೆ ಸೃಷ್ಟಿಯಾಗಿದೆ ಎಂದು ಶೈಲೇಶ್ ಪತ್ನಿ ಕವಿತಾ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮಾತನಾಡಿ, ಪೊಲೀಸರು ಯಾವುದೇ ತನಿಖೆ ನಡೆಸದೆ ಶೈಲೇಶ್ನನ್ನು ಬಂಧಿಸಿ ಒಂದೂವರೆ ವರ್ಷಗಳಿಂದ ಸೌದಿ ಜೈಲಿನಲ್ಲಿದ್ದಾರೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಂಘಟನೆಗಳು ಕೂಡ ಈ ವಿಚಾರದಲ್ಲಿ ಮೌನವಹಿಸಿವೆ ಎಂದರು.
ಸ್ಥಳೀಯ ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ಈ ವಿಷಯವನ್ನು ತರಲಾಗಿದೆ. ಕಟೀಲ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದರೂ ಯಾವುದೇ ಪ್ರಗತಿಯಾಗಿಲ್ಲ. ಶೈಲೇಶ್ ಬಿಡುಗಡೆಗೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೊಟ್ಟಾರಿ ಹೇಳಿದ್ದಾರೆ.