ಮಂಗಳೂರು, ನ20(SS): ಬಂಧುತ್ವದ ಅಮರ ಸಂದೇಶವನ್ನು ನೀಡಿ ಮನುಕುಲಕ್ಕೆ ಶಾಂತಿ - ಸನ್ಮಾರ್ಗವನ್ನು ತೋರಿದ ಮುಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮ ದಿನವಾದ ಈದ್-ಮಿಲಾದ್ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಮಂಗಳೂರಿನ ಹೊರವಲಯದ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿಯಲ್ಲಿ ಮೊಹಮ್ಮದ್ ಪೈಗಂಬರ್ ಜನ್ಮದಿನಚಾರಣೆ ಪ್ರಯುಕ್ತ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಸೀದಿ ಖತೀಬರಾದ ಮಹಮ್ಮದ್ ಶರೀಫ್ ಇಂದಾಂದಿ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಮಹಮ್ಮದ್ ಪೈಗಂಬರ್ ಅವರ ಜೀವನ, ಅವರು ಸಾಗಿ ಬಂದ ಹಾದಿಯ ಮತ್ತು ನೆಬಿ ದಿನದ ಮಹತ್ವದ ಬಗ್ಗೆ ತಿಳಿಸಿದ್ದಾರೆ.
ಇನ್ನೂ ಮಸೀದಿ ಅಧ್ಯಕ್ಷರಾದ ಅಡ್ವಕೇಟ್ ಅಬ್ದುಲ್ ನಝೀರ್ ಮೂಡುಶೆಡ್ಡೆ ನೆಬಿ ಮಹಮ್ಮದ್ ಮುಸ್ತಫಾರು ತಮ್ಮ ಜೀವನದಲ್ಲಿ ಮತ್ತು ಇಸ್ಲಾಂನ ಪ್ರಚಾರದ ವೇಳೆ ಅನುಭವಿಸಿದ ನೋವು ಮತ್ತು ತ್ಯಾಗಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರವಾದಿ ಜನ್ಮ ದಿನದ ಅಂಗವಾಗಿ ಇಸ್ಲಾಮಿಕ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಸೀದಿ ವತಿಯಿಂದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಜುಮಾ ಮಸೀದಿಯ ಗುರುಗಳಾದ ಕೆ.ಪಿ ಇಬ್ರಾಹಿಂ ಮುಸ್ಲಿಯಾರ್, ಮಸೀದಿ ಕಾರ್ಯದರ್ಶಿ ಮಹಮ್ಮದ್ ಹನೀಫ್, ಅಡ್ವಕೇಟ್ ಇಲ್ಯಾಸ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.