ಮಂಗಳೂರು, ನ 20(MSP): ಪ್ರವಾದಿ ಮಹಮ್ಮದ್ ಅವರ ಜನ್ಮದಿನವಾದ ಇಂದು ಈದ್ ಮಿಲಾದ್ ಹಬ್ಬವನ್ನು ನಗರದಾದ್ಯಂತ ಆಚರಿಸಲಾಗುತ್ತಿದೆ. ಆದರೆ ಇಲ್ಲೊಂದು ಸಂಸ್ಥೆ ಈದ್ ಮಿಲಾದ್ ಹಬ್ಬವನ್ನು ಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿಕೊಂಡಿತು.
ಪ್ರವಾದಿ ಮಹಮ್ಮದ್ ಸಂದೇಶದಂತೆ ಸೌಹಾರ್ದತೆಯ ಸಂಕೇತವಾದ ಈದ್ ಮಿಲಾದ್ ಹಬ್ಬಕ್ಕಾಗಿ ಹಿಂದೂ ಧರ್ಮದ ಸ್ನೇಹಿತರೊಂದಿಗೆ ಸೇರಿ ಈದ್ ಮಿಲಾದ್ ಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷ. ಸೋದರತೆ ಮತ್ತು ಸೌಹಾರ್ದತೆಯ ತಳಹದಿಯಲ್ಲಿ ಬಾಳಿ-ಬದುಕಲು ಸರ್ವರಿಗೂ ಅವಕಾಶ ಕಲ್ಪಿಸುವ ಸ್ಪೂರ್ತಿ ಹಾಗೂ ಪ್ರೇರಣೆಯಾದ ಈದ್ - ಮಿಲಾದ್ ಹಬ್ಬವನ್ನು ನಗರದ ಕಣ್ಣೂರಿನ ಎ1 ಕ್ಯಾಬ್ ಸಂಸ್ಥೆ ಅರ್ಥಪೂರ್ಣವಾಗಿ ಆಚರಿಸಿಕೊಂಡಿತು. ತನ್ನ 5 ನೇ ವರ್ಷದ ಈದ್ ಮಿಲಾದ್ ಹಬ್ಬದ ಆಚರಣೆಯ ಸಂದರ್ಭ ಸ್ಥಳೀಯ ಹಿಂದೂ ಬಾಂಧವರನ್ನು ಹಬ್ಬಕ್ಕೆ ಆಹ್ವಾನಿಸಿ ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವಾಗಿ ಗುಲಾಬಿ ಹೂವು ನೀಡಿ ಹಬ್ಬವನ್ನು ನೀಡಿ ಶುಭ ಹಾರೈಸಿದರು. ಜತೆಗೆ ಪರಸ್ಪರ ಸಿಹಿ ಹಂಚಿ ಹಬ್ಬದ ಶುಭಾಷಯವನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಕಣ್ಣೂರು ಜುಮ್ಮಾ ಮಸೀದಿಯ ಮುಖ್ಯಸ್ಥರಾದ ಅನ್ಸರ್ ಫೈಜ್ ಪ್ರಸ್ತುತ ಕಾಲಘಟ್ಟದಲ್ಲಿ ಈದ್ ಮಿಲಾದ್ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಇದನ್ನು ಆಚರಿಸುವುದರೊಂದಿಗೆ ಎ ವನ್ ಸದಸ್ಯರು ಹಬ್ಬದ ನೈಜ ಸಂದೇಶವನ್ನು ಪಸರಿಸುವ ಕೆಲಸ ಮಾಡಿದ್ದಾರೆ . ಇಲ್ಲಿಗೆ ನಮ್ಮ ಕರೆಗೆ ಓಗೊಟ್ಟು ಆಗಮಿಸಿದೆ ನಮ್ಮ ಹಿಂದೂ ಸಹೋದರು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ ಎಂದರು.
ಈ ಸಂದರ್ಭ ಪ್ರತೀಕ್ ರಾಜ್, ಸುಮನ್ ಮಿಲಂದ್, ಪ್ರೀತಂ ಬಂಗೇರಾ, ತೇಜಸ್ ಶೆಟ್ಟಿ , ಹಾಗೂ ಎ1 ಸಂಸ್ಥೆಯ ಮುಸ್ತಫಾ ರಿಯಾಜ್ , ನಿಝಾರ್, ಅಹಮದ್ ಬಾವಾ, ನೌಷದ್, ಯಸಿನ್ ಸಿಥಾರ್ ಮುಂತಾದವರು ಉಪಸ್ಥಿತರಿದ್ದರು.