ಮಂಗಳೂರು, ನ 20(MSP):ಬುಲೆಟ್ ಬೈಕ್ ನಲ್ಲಿ ಸವಾರಿ ಮಾಡುತ್ತಿರುವಾಗ ಬೈಕ್ ನ ಮುಂಭಾಗದಲ್ಲಿ ನಾಗರಹಾವು ಹೆಡೆ ಎತ್ತಿ ಬುಸುಗುಟ್ಟಿದರೆ, ಬೈಕ್ ಸವಾರಿ ಮಾಡುತ್ತಿರುವ ಸವಾರನಿಗೆ ಒಂದು ಕ್ಷಣ ಉಸಿರು ನಿಂತತಾಗುವುದು ಸಹಜ.
ಈ ರೀತಿಯ ಅನುಭವವಾಗಿದ್ದು, ಮರಕಡ ನಿವಾಸಿ ಬದ್ರುದ್ದೀನ್ ಕೂಳೂರು ಅವರಿಗೆ ಕಾವೂರು ಆಟೋವರ್ಕ್ಸ್ ಮಾಲೀಕರಾಗಿರುವ ಬದ್ರುದ್ದೀನ್ ಭಾನುವಾರ ಮಧ್ಯಾಹ್ನ ಮರಕಡದ ತಮ್ಮ ಮನೆಯಿಂದ ನುಡಿಸಿರಿಗೆಂದು ಬುಲೆಟ್ ಬೈಕ್ ನಲ್ಲಿ ಹೊರಟಿದ್ದರು.
ಹೊರಡುವಾಗಲೇ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಮುಂದೆ ಮನೆಯ ಬೆಕ್ಕು ಕೂಗುತ್ತಾ ಸುತ್ತು ಹಾಕುತ್ತಿತ್ತು. ಇದನ್ನು ಕಡೆಗಣಿಸಿದ ಅವರು ಮರಕಡ ಪೆಟ್ರೋಲ್ ಬಂಕ್ ಗೆ ಬಂದಿದ್ದಾರೆ. ಪೆಟ್ರೋಲ್ ಹಾಕಿಸಿ ಇನ್ನೇನು ರಸ್ತೆಗೆ ಇಳಿಯಬೇಕು ಎನ್ನುವಷ್ಟರಲ್ಲಿ ಬೈಕ್ ನ ಕೀ ಹಾಕುವ ಸ್ಥಳದ ಸನಿಹದಿಂದ ಪುಟಾಣಿ ನಾಗರಹಾವೊಂದು ತಲೆ ಎತ್ತಿದೆ. ಒಂದು ಕ್ಷಣ ಗಲಿಬಿಲಿಗೊಂಡರೂ, ಬದ್ರುದ್ದೀನ್ ಬೈಕ್ ನಿಲ್ಲಿಸಿ ಕೆಳಗೆ ಇಳಿದಿದ್ದಾರೆ. ಆಗ ಸ್ಥಳೀಯರೆಲ್ಲರೂ ಸೇರತೊಡಗಿದ್ದಾರೆ. ಅಷ್ಟದರೂ ಬೈಕ್ ನಿಂದ ಇಳಿಯದ ನಾಗರ ಹಾವು ಹೆಡೆ ಎತ್ತಿ ತನ್ನ ಬಳಿ ಯಾರು ಸುಳಿಯದಂತೆ ಬುಸುಗುಟ್ಟಿ ನೆರೆದಿದ್ದವರಿಗೆ ಮನೋರಂಜನೆ ನೀಡಿತು.
ಕೊನೆಗೆ ಅಲ್ಲಿದ್ದವರು ಯಾರೋ ಹಾವು ಹಿಡಿಯುವ ಗಂಗಯ್ಯ ಬೋಳಾರ್ ಎಂಬವರಿಗೆ ಕರೆ ಮಾಡಿದ್ದಾರೆ. ಬಳಿಕ ಬೈಕ್ ನ ಹೆಡ್ ಲೈಟ್ ಕೆಳಭಾಗದಲ್ಲಿರುವ ವೈಯರ್ ಗಳ ಎಡೆಯಲ್ಲಿ ಕಳಿತು ತಲೆ ಎತ್ತಿ ನೋಡುತ್ತಿರುವ ಹಾವನ್ನು ಸ್ನೇಕ್ ಕ್ಯಾಚರ್ ಗಂಗಯ್ಯ ನಾಜೂಕಾಗಿ ಹಿಡಿದು ಗೋಣಿಗೆ ಹಾಕಿ ಬಳಿಕ ಹಾವನ್ನು ಪಿಲಿಕುಳಕ್ಕೆ ಒಪ್ಪಿಸಿದರು.