ಬೆಂಗಳೂರು, ನ 19(SM): ರೈತ ಮಹಿಳೆ ವಿರುದ್ಧ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆಯೇ ರೈತ ಮಹಿಳೆಯ ವಿರುದ್ಧ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಹೆಚ್ ಡಿಕೆ ವಿಶಾದ ವ್ಯಕ್ತಪಡಿಸಿದ್ದಾರೆ.
ಮಹಿಳೆಯರೆಂದರೆ ನನಗೆ ಗೌರವ ಇದೆ. ನನ್ನ ಹೇಳಿಕೆಯಲ್ಲಿ ಯಾವ ದುರುದ್ದೇಶವೂ ಇರಲಿಲ್ಲ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ರೈತರ ಕ್ಷಮೆ ಕೇಳದ ಕುಮಾರಸ್ವಾಮಿ ಎಚ್ಡಿ ಕುಮಾರಸ್ವಾಮಿಯವರ ಬಳಿ ಬೆಳಗಾವಿಯ ರೈತ ಮಹಿಳೆಯೊಬ್ಬರು ತಮ್ಮ ನೋವನ್ನು ಹೇಳಿಕೊಂಡಾಗ ಇಷ್ಟು ದಿನ ಎಲ್ಲಿ ಮಲಗಿದ್ದೆ ಎನ್ನುವ ಸಿಎಂ ಹೇಳಿದ್ದರು. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೂಡಲೇ ರೈತ ಮಹಿಳೆ ಬಳಿ ಕ್ಷಮೆ ಕೋರುವಂತೆ ಒತ್ತಾಯ ಮಾಡುತ್ತಿದ್ದಾರೆ.
ಈ ನಡುವೆಯೇ ಪ್ರತಿಕ್ರಿಯೆ ನೀಡಿರುವ ಸಿಎಂ, ನಾನು ಹಿಂದಿನಿಂದಲೂ ರೈತರ ಪರವಾಗಿದ್ದವನು. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ. ಬೆಳಗಾವಿಯ ಜಿಲ್ಲೆಯ ರೈತರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೊತ್ತಾ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದಾಗಲೂ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿದ್ದೇನೆ. ರೈತರ ರಕ್ಷಣೆಗೆ ನಾನು ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ.
ಉತ್ತರ ಕರ್ನಾಟಕದವರು, ಇದು ಬ್ಯಾಂಕ್ ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಏನೇನು ಪ್ರಯತ್ನ ಮಾಡಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂಬ ಹೇಳಿಕೆಗಳನ್ನು ಸಿಎಂ ಬಿಡುಗಡೆಗೊಳಿಸಿದ್ದಾರೆ.