ಬೆಂಗಳೂರು, ನ 19(MSP): ಬಿಜೆಪಿಗೆ ಸುಳ್ಳು ಹೇಳಿಕೊಂಡು ತಿರುಗುವುದು ಮಾತ್ರ ತಿಳಿದಿದೆ, ಕಾಂಗ್ರೆಸ್ ನಲ್ಲಿರುವುದು ಕುಟುಂಬ ರಾಜಕಾರಣ ಎಂದು ಆರೋಪಿಸುವ ಬಿಜೆಪಿಯೂ ರಾಜೀವ್ ಗಾಂಧಿ ನಂತರ ನೆಹರು ಕುಟುಂಬದಲ್ಲಿ ಯಾರು ಪ್ರಧಾನಿಯಾಗಿದ್ದಾರೆ? ಎನ್ನುವುದನ್ನು ಉತ್ತರಿಸಬೇಕು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಪುಷ್ಪ ಅಮರನಾಥ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಜನರನ್ನು ಮರಳು ಮಾಡುವುದು ಮಾತ್ರ ಕೆಲಸ ಎಂದು ಕಿಡಿಕಾರಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮೌನತಳೆದಿದ್ದಾರೆ. ಇನ್ನು ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆಯಾದರೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನು ಪತ್ರಿಕೆಯವರು ಇವರ ವಿರುದ್ಧ ಬರೆಯುವಂತೆ ಮಾಡಿದ್ದಾರೆ. ಅದ್ದರಿಂದ ಮಾಧ್ಯಮಗಳು ಇವರ ವಿರುದ್ದ ಸುದ್ದಿ ಪ್ರಕಟಿಸಲು ಹೆದರುತ್ತಿವೆ. ಅಪರೂಪವಾಗಿ ಸುದ್ದಿ ಪ್ರಕಟಿಸಿ ಸುಮ್ಮನಾಗುತ್ತವೆ . ಆದ್ದರಿಂದ ಸುಳ್ಳು ಹೇಳುವ ಬಿಜೆಪಿಯನ್ನು ಸೋಲಿಸಬೇಕು. 2019 ರ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಚುನಾವಣೆಯಲ್ಲಿ ಗೆದ್ದು ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದರು.
ಇನ್ನು ಇದೇ ವೇಳೆ ಅಧಿಕಾರ ಶಾಶ್ವತವಲ್ಲ ಎಂದ ಅವರು ಅಧಿಕಾರ ಯಾವಾಗ ಬೇಕಾದರೂ ಕೈಜಾರಬಹುದು ಅಥವಾ ಸಿಗಬಹುದು. ಆದರೆ ಅಧಿಕಾರ ದೊಅಕಿದ ಸಂದರ್ಭದಲ್ಲಿ ಮಾಡಿದ ಕೆಲಸ ಮಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತದೆ. ಅದ್ದರಿಂದ ಅಧಿಕಾರ ಇದ್ದವರು ಉತ್ತಮ ಕೆಲಸ ಮಾಡಬೇಕು ಎಂದು ಖರ್ಗೆ ಪುಷ್ಪ ಅಮರನಾಥ್ ಅವರಿಗೆ ಕಿವಿಮಾತು ಹೇಳಿದರು.