ಕಾರ್ಕಳ, ನ.08 (DaijiworldNews/HR): ಕಂದಾಯ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮತ್ತು ಗ್ರಾಮ ಪಂಚಾಯತುಗಳಿಗೆ ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡುವ ಸದುದ್ದೇಶದಿಂದ ಕಂದಾಯ ಮೇಳ ಕಾರ್ಯಕ್ರಮವು ನವಂಬರ್ 15 ರಿಂದ ಇಲಾಖಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ನವಂಬರ್ 21 ರಂದು ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸುವ ಬೃಹತ್ ಕಂದಾಯ ಮೇಳದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಭಾಗವಹಿಸಲಿದ್ದಾರೆ ಎಂದು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಛೇರಿ ವಿಕಾಸದಲ್ಲಿ ಆಯೋಜಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿವಿಧ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಬೇರೆ ಬೇರೆ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಕಡತಗಳ ಅಡೆತಡೆಗಳನ್ನು ನಿವಾರಣೆ ಮಾಡಿ ಶೀಘ್ರ ವಿಲೇವಾರಿ ಮಾಡುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಕಾರ್ಕಳ ಕ್ಷೇತ್ರದ ಇತಿಹಾಸವನ್ನು ಬಿಂಬಿಸುವ ಕಾರ್ಕಳ ಉತ್ಸವವು ಡಿಸೆಂಬರ್ 18ರಂದು ಮೊದಲ್ಗೊಂಡು ಡಿಸಂಬರ್ 26ರವರೆಗೆ ಒಂದು ವಾರಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 9 ದಿನಗಳ ಸಮಯ ನಡೆಸಲು ಉದ್ದೇಶಿಸಲಾಗಿದೆ ಎಂದು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ಸುಮಾರು 150 ಕಲಾ ತಂಡಗಳು, ರಾಜ್ಯದ ವಿವಿಧ ಭಾಗಗಳಿಂದ ಕಾರ್ಕಳಕ್ಕೆ ಆಗಮಿಸಲಿದೆ. ವಸ್ತು ಪ್ರದರ್ಶನ, ಆಹಾರ ಮೇಳ, ಹೆಲಿಕಾಪ್ಟರ್ ಪ್ರಯಾಣ, ಕಂಬ ಕ್ರೀಡೆ, ವಿಶೇಷವಾದ ಕಲಾ ತಂಡಗಳೊಂದಿಗೆ ಪುರ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳಿಂದ ಕಾರ್ಕಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಪ್ರಮುಖವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಶಾಲಾ - ಕಾಲೇಜುಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಕಳ ಉತ್ಸವವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಬಿಜೆಪಿಯ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರವೀಂದ್ರ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮ್ ಸಾಲ್ಯಾನ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಸ್ವಾಗತಿಸಿ ವಂದಿಸಿದರು.