ಮಂಗಳೂರು, ನ.08 (DaijiworldNews/HR): ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಪದ್ಮಶ್ರೀ ಪ್ರಶಸ್ತಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಮರಣೋತ್ತರವಾಗಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರ ಪರವಾಗಿ ಅವರ ಪಟ್ಟಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಸ್ವೀಕರಿಸಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬೆಳಗ್ಗೆ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
7 ಪದ್ಮವಿಭೂಷಣ, 10 ಪದ್ಮಭೂಷಣ, 102 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ. ಪ್ರಶಸ್ತಿ ಪಡೆದವರಲ್ಲಿ 29 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಸೇರಿದ್ದಾರೆ.
ಜಪಾನ್ನ ಮಾಜಿ ಪ್ರಧಾನಿ ಶಿಂಬೊ ಅಬೆ, ಕರ್ನಾಟಕದ ಡಾ. ಬಿ. ಎಂ. ಹೆಗ್ಡೆ, ಗಾಯಕ ಎಸ್. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದ ಸಾಧಕರು.
ಕೃಷ್ಣನ್ ನಾಯರ್ ಶಾಂತಾ ಕುಮಾರಿ ಚಿತ್ರಾ, ತರುಣ್ ಗೊಗಯ್ (ಮರಣೋತ್ತರ), ಚಂದ್ರ ಶೇಖರ ಕಂಬಾರ, ಸುಮಿತ್ರಾ ಮಹಾಜನ್, ನೃಪೇಂದ್ರ ಮಿಶ್ರಾ, ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ), ಕೇಶುಭಾಯ್ ಪಟೇಲ್ (ಮರಣೋತ್ತರ), ಕಲ್ಬೆ ಸಾದಿಕ್ (ಮರಣೋತ್ತರ), ರಜನಿಕಾಂತ್ ದೇವಿದಾಸ್ ಶ್ರಾಫ್, ತರ್ಲೋಚನ್ ಸಿಂಗ್ ಪದ್ಮಭೂಷಣ ಪ್ರಶಸ್ತಿ ಪಡೆದವರು.
ಪದ್ಮಶ್ರೀ ಪ್ರಶಸ್ತಿ ಪಡೆದ102 ಸಾಧಕರಲ್ಲಿ ಕರ್ನಾಟಕದ ಮಾತಾ ಬಿ. ಮಂಜಮ್ಮ ಜೋಗತಿ (ಕಲೆ), ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ), ಕೆ. ವೈ. ವೆಂಕಟೇಶ್ (ಕ್ರೀಡೆ) ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರಾಗಿದ್ದಾರೆ.