ಮಂಗಳೂರು, ನ.08 (DaijiworldNews/HR): ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 2021-22ನೇ ಸಾಲಿನ ನೂತನ ಶೈಕ್ಷಣಿಕ ವರ್ಷ ನವೆಂಬರ್ 8ರ ಇಂದಿನಿಂದ ಆರಂಭವಾಗಲಿದೆ.
ಸಾಂದರ್ಭಿಕ ಚಿತ್ರ
ವಿ.ವಿ. ವ್ಯಾಪ್ತಿಯ ಬಿಕಾಂ ಮತ್ತು ಬಿಬಿಎ ಹೊರತುಪಡಿಸಿ ಎಲ್ಲಾ ಪದವಿ ತರಗತಿಗಳು ಸೋಮವಾರದಿಂದ ಪ್ರಾರಂಭವಾಗಿದ್ದು, ಹಿಂದಿನ ವರ್ಷಕ್ಕೆ ಸಂಬಂಧಿಸಿದ ಬಿ ಕಾಮ್ ಮತ್ತು ಬಿಬಿಎ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಈಗ ನಡೆಯುತ್ತಿರುವುದರಿಂದ, ಈ ತರಗತಿಗಳು ನವೆಂಬರ್ 12 ರಂದು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ವಿ.ವಿ. ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ, "ನವೆಂಬರ್ 8ರ ಸೋಮವಾರದಿಂದ ಹೊಸ ಶಿಕ್ಷಣ ನೀತಿಯಡಿ ಕಾಲೇಜು ತರಗತಿ ಆರಂಭವಾಗಲಿದ್ದು, ಹೊಸ ಪಠ್ಯಕ್ರಮವನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿ ಗೊಳಿಸಲಾಗುತ್ತಿದೆ. ಇದಕ್ಕಾಗಿ 48 ಅಧ್ಯಯನ ಮಂಡಳಿ ರಚಿಸಲಾಗಿದೆ" ಎಂದರು.
ಇನ್ನು ಒಟ್ಟು 61 ಕೋರ್ಸ್ಗಳ ಪೈಕಿ 6 ಕೋರ್ಸ್ಗಳನ್ನು ಹೊರತುಪಡಿಸಿ ಉಳಿದ ಪಠ್ಯ ಈ ಹಿಂದೆಯೇ ಅಂತಿಮವಾಗಿದ್ದು, ಬಾಕಿ ಉಳಿದಿದ್ದ ಕಂಪ್ಯೂಟರ್ ಅಪ್ಲಿಕೇಶನ್, ಡಾಟಾ ಪ್ರೊಸೆಸಿಂಗ್, ಫ್ರೆಂಚ್, ತುಳು, ಅರೇಬಿಕ್ ಹಾಗೂ ಸಾಮಾನ್ಯ ಕಲಾ ಕೋರ್ಸ್ಗಳ ಪಠ್ಯ ಕೂಡ ಪೂರ್ಣವಾಗಿದ್ದು ಕಾಲೇಜು ಆರಂಭಕ್ಕೆ ಬೇಕಾದ ಎಲ್ಲ ಸಿದ್ಧತೆ ಪೂರ್ಣವಾಗಿದೆ" ಎಂದಿದ್ದಾರೆ.