ತಿರುವನಂತಪುರ, ನ 19(MSP): 50 ವರ್ಷ ಮೇಲ್ಪಟ್ಟು ವಯಸ್ಸಾದರೂ, ಹಿಂದು ಐಕ್ಯ ವೇದಿ ಸಂಘಟನೆಯ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ ಅವರು ಅಯ್ಯಪ್ಪ ದರ್ಶನಕ್ಕೆ ತೆರಳುವಾಗ, ನಿಷೇಧಾಜ್ಞೆ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶಶಿಕಲಾ ಅವರಿಗೆ ಕೊನೆಗೂ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಕೇರಳದಾದ್ಯಂತ ಹಿಂದೂ ಮುಖಂಡರುಗಳ ಮತ್ತು ಸುಮಾರು 70ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಉಗ್ರ ರೂಪ ಪಡೆಯುತ್ತಿದ್ದಂತೆ, ಕೇರಳ ಪೊಲೀಸರು ತಮ್ಮ ವಶದಲ್ಲಿದ್ದ ಹಿಂದೂ ಪರ ನಾಯಕಿ ಕೆಪಿ ಶಶಿಕಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ, ಅಯ್ಯಪ್ಪ ದರ್ಶನ ಮಾಡಬಹುದು ಎಂದಿದ್ದಾರೆ.
ಆದರೆ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡುವ ಶಶಿಕಲಾ ಅವರಿಗೆ ಪೊಲೀಸರು ಷರತ್ತು ವಿಧಿಸಿದ್ದು, 6 ಗಂಟೆ ಒಳಗೆ ದರ್ಶನ ಕಾರ್ಯ ಮುಗಿಸುವಂತೆ ಸೂಚನೆ ನೀಡಿದ್ದಾರೆ. 6 ಗಂಟೆಗಳೊಳಗೆ ಸನ್ನಿಧಾನಂ ಪ್ರವೇಶ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಮಾಡುವಂತೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಪೊಲೀಸರ ಅನುಮತಿ ನೀಡಿದ ಪತ್ರದೊಂದಿಗೆ, ಶಶಿಕಲಾ ಅವರು ಅಯ್ಯಪ್ಪ ಸನ್ನಿಧಾನದತ್ತ ತೆರಳುತ್ತಿದ್ದು, ಇದೇ ಸಂದರ್ಭ ಪತ್ರವನ್ನು , ಬಸ್ಸಿನಲ್ಲಿ ಕುಳಿತೇ ಮಾಧ್ಯಮಗಳಿಗೆ ಪ್ರದರ್ಶಿಸಿದ್ದಾರೆ.