ಮಂಗಳೂರು,ನ 19(MSP): ಪಂಪ್ ವೆಲ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ತೆರವು ಕಾರ್ಯದ ವಿಳಂಬವೇ ಕಾರಣ ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ. ಭಾನುವಾರ ಬೆಳಗ್ಗೆ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ರಾಜ್ಯ ಸರ್ಕಾರ ನಿಧಾನ ಮಾಡಿರುವುದು ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ತಡವಾಗಲು ಕಾರಣ ಎಂದು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ವಿನ್ಯಾಸ ವನ್ನು 15 ವರ್ಷದ ಹಿಂದೆ ರಚಿನೆ ಮಾಡಲಾಗಿತ್ತು. ಆದರೆ ಬಳಿಕ ಪಂಪ್ವೆಲ್ನಲ್ಲಿ ಬಸ್ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ಹೆದ್ದಾರಿ ವಿನ್ಯಾಸ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂತು. ಹೀಗಾಗಿ ರಾಜ್ಯ ಸರ್ಕಾರ, ಮತ್ತು ಆಗ ಇದ್ದ ಜಿಲ್ಲಾಧಿಕಾರಿಯವರು ನಿಧಾನಗತಿಯಲ್ಲಿ ಕೆಲಸ ಮಾಡಿದ್ದರಿಂದ ಹೆದ್ದಾರಿ ಕಾಮಗಾರಿ ಆರಂಭಿಸಲು ಆಗಿರಲಿಲ್ಲ. ಈ ನಡುವೆ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಸಂಸ್ಥೆ ಆರ್ಥಿಕ ನಷ್ಟಕ್ಕೆ ಒಳಗಾಯಿತು. ಈ ಎಲ್ಲ ಕಾರಣದಿಂದ ಕಾಮಗಾರಿ ತಡವಾಯಿತು ಎಂದರು.
ಇದೀಗ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿರುವ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಕೆಲಸ ಚುರುಕು ಪಡೆದುಕೊಂಡಿದ್ದು, ೨೦೧೯ರ ಜನವರಿ ಅಂತ್ಯದ ವೇಳೆಗೆ ಉದ್ಘಾಟನೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಇದಲ್ಲದೆ ತೊಕ್ಕೊಟ್ಟಿನ ಮೇಲ್ಸೇತುವೆಗೆ ಮತ್ತು ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಲಸವಷ್ಟೇ ಬಾಕಿ ಉಳಿದಿದ್ದು, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.