ತಿರುವನಂತಪುರಂ, ನ 19(MSP): ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಸುಮಾರು 70 ಮಂದಿ ಭಕ್ತರನ್ನು ಹಾಗೂ ಬಿಜೆಪಿ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಾರ ಕೇರಳದಲ್ಲಿ ಕಾಡ್ಗಿಚ್ಚಿನಂತೆ ಹರಿಡಿದ್ದು, ಬಿಜೆಪಿ, ಆರ್ ಎಸ್ ಎಸ್ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಕೇರಳದಾದ್ಯಂತ ಪ್ರತಿಭಟನೆ ನಡೆಸಿವೆ. ಈ ಪ್ರತಿಭಟನೆಯ ಬಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ತಟ್ಟಿದೆ.
ಕೇರಳ ರಾಜಧಾನಿ ತಿರುವನಂತಪುರಂನಲ್ಲಿರುವ ಸಿಎಂ ಅವರ ಅಧಿಕೃತ ನಿವಾಸ ದಿ ಕ್ಲಿಫ್ ಹೌಸ್ ಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅವರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದ್ದಾರೆ. ಇನ್ನೊಂದೆಡೆ ಆರೆಸ್ಸೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ, ಕೇರಳ ಬಿಜೆಪಿ ಮುಖಂಡರು ಸೋಮವಾರ ಕೇರಳ ರಾಜ್ಯಪಾಲ ಪಿ ಸದಾಶಿವಂರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.