ಕಾರ್ಕಳ, ನ 18(SM): ಆಸ್ತಿಗಾಗಿ ತಮ್ಮನನ್ನು ರಾಡ್ನಿಂದ ಬಡಿದು ಕೊಂದು ಐತಿಹಾಸಿಕ ರಾಮಸಮುದ್ರ ಪರಿಸರದಲ್ಲಿ ಸುಟ್ಟು ಸಾಕ್ಷ್ಯಧಾರ ನಾಶಪಡಿಸಿದ ಆರೋಪಿಯೊಬ್ಬನನ್ನು ಎಂಟು ತಿಂಗಳ ಬಳಿಕ ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಸಫಲರಾಗಿದ್ದಾರೆ. ಕಾರ್ಕಳ ನಗರದ ಮಂಗಲಪಾದೆ ಅವೇ ಮರಿಯ ನಿವಾಸಿ ಮೆಲ್ವಿನ್ ಸಂತೋಷ್ ಡಿಸೋಜ ಪ್ರಕರಣದ ಆರೋಪಿ. ಈತನ ತಮ್ಮ ಅವಿಲ್ ಡಿಸೋಜಾ ಕೊಲೆಗೀಡಾದವರು.
2018 ಮಾರ್ಚ್ 30ರ ರಾತ್ರಿ 10ಗಂಟಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರಲ್ಲಿ ಜಗಳ ಉಂಟಾಗಿತ್ತು. ಆ ಸಂದರ್ಭದಲ್ಲಿ ಅವಿಲ್ ಡಿಸೋಜಾ ತನ್ನ ಅಣ್ಣ ಮೆಲ್ವಿನ್ ಸಂತೋಷ್ ಡಿಸೋಜನಿಗೆ ಹಲ್ಲೆಗೈದಿದ್ದಾನೆ. ಅದಕ್ಕೆ ಪ್ರತಿಯಾಗಿ ಮೆಲ್ವಿನ್ ರಾಡ್ನಿಂದ ಪ್ರತಿದಾಳಿ ನಡೆಸಿದಾಗ ಘಟನಾ ಸ್ಥಳದಲ್ಲಿಯೇ ಅವಿಲ್ ಮೃತಪಟ್ಟಿದ್ದಾನೆ.
ಪ್ರಕರಣದ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದಾಗಿ ಮನೆ ಸಮೀಪದ ರಾಮಸಮುದ್ರದ ಪರಿಸರದಲ್ಲಿ ತಡರಾತ್ರಿ ಶವವನ್ನು ಹೊತ್ತು ಸಾಗಿದಲ್ಲದೇ ಮೃತದೇಹವನ್ನು ಸುಟ್ಟಿದ್ದ. ಬಳಿಕ ಅವಿಲ್ ನಾಪತ್ತೆಯಾದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿತ್ತು.