ಮಂಗಳೂರು, ನ 18(SM): ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನದಂದು ಆಚರಿಸಲಾಗುವ ಮೀಲಾದುನ್ನಬಿ ಹಿನ್ನೆಲೆ ದ.ಕ. ಜಿಲ್ಲೆಯಲ್ಲಿ ನವೆಂಬರ್ 20ರ ಮಂಗಳವಾರದಂದು ಸರಕಾರಿ ರಜೆ ಘೋಷಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಿಲಾದ್ ಸರಕಾರಿ ರಜೆ ನ.21 ರಂದು ನಿಗದಿಯಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 20ರಂದು ಮಿಲಾದ್ ಆಚರಿಸಲಾಗುತ್ತದೆ. ಅಂದು ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನವಂಬರ್ 21ರ ಸರಕಾರಿ ರಜೆಯನ್ನು ಬದಲಾಯಿಸಿ ನ. 20 ರಂದು ಶಾಲಾ ಕಾಲೇಜುಗಳಿಗೆ, ಸರಕಾರಿ ಕಚೇರಿಗಳಿಗೆ ರಜಾ ದಿನವನ್ನಾಗಿ ಪರಿಗಣಿಸಲು ಹಾಗೂ ನ.21 ರಂದು ಎಂದಿನಂತೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.