ಚಿಕ್ಕಬಳ್ಳಾಪುರ, ನ 18 (MSP): ಉಡುಪಿಯ ಪೇಜಾವರ ಮಠದ ಮುಖ್ಯಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭದ್ರತೆ ನೀಡುತ್ತಿದ್ದ ಪೊಲೀಸರ ಬೆಂಗಾವಲು ವಾಹನ ಹಾಗೂ ಮತ್ತೊಂದು ಕಾರಿನ ನಡುವೆ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಪನಹಳ್ಳಿ ಗೇಟ್ ಬಳಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(75) ಸರ್ವಲೋಚನಾ(70) ಮೃತ ದಂಪತಿ.
ನಾಮಕರಣ ಕಾರ್ಯಕ್ರಮದ ನಿಮಿತ್ತ ಜ್ಯುವೆಲ್ಲರಿ ಶಾಪ್ ಮಾಲೀಕರಾದ ರಾಮಕೃಷ್ಣಯ್ಯ ಹಾಗೂ ಅವರ ಕುಟುಂಬ ಚಿಂತಾಮಣಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಅಲ್ಲದೆ ಅಪಘಾತದಲ್ಲಿ ರಾಮಕೃಷ್ಣಯ್ಯ ಅವರ ಸೊಸೆ ನಳಿನಿ(55) ಗಂಭೀರವಾಗಿ ಗಾಯಗೊಂಡಿದ್ದು ಕಾರು ಚಾಲಕ ನಾಗೇಶ್ ಎಂಬವರ ಕಾಲುಗಳಿಗೂ ಗಂಭೀರ ಗಾಯಗಳಾಗಿವೆ.
ಮತ್ತೊಂದೆಡೆ ಡಿಕ್ಕಿಯಾದ ಹೈವೇ ಪ್ರಾಟ್ರೋಲಿಂಗ್ ಪೊಲೀಸ್ ವಾಹನದ ಚಾಲಕ ಸೇರಿದಂತೆ ಎಎಸ್ ಶಂಭಯ್ಯ ಕೂಡ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನೂ ಪೇಜಾವರ ಶ್ರೀಗಳು ಚಿಂತಾಮಣಿ ತಾಲೂಕಿನ ಕೋನಕುಂಟ್ಲು ಗ್ರಾಮದಲ್ಲಿ ನಡೆಯುತ್ತಿರುವ ಕಾನ್ವ ಸಮ್ಮೇಳನದಲ್ಲಿ ಭಾಗವಹಿಸಿಲು ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ತೆರಳುತ್ತಿದ್ದರು.