ಪುಣೆ, ನ 18(MSP): ಮುಂದಿನ ಬಾರಿ ಶಬರಿಮಲೆಗೆ ತೆರಳುವ ಸಂದರ್ಭ ಯಾವುದೇ ಸೂಚನೆ ನೀಡದೆ ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುತ್ತೇವೆ ಎಂದು ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ. ಈ ಬಾರಿ ನಾವು ಶಬರಿಮಲೆಗೆ ತೆರಳುವುದಕ್ಕೂ ಮೊದಲು, ಬಹಿರಂಗವಾಗಿ ಘೋಷಣೆ ಮಾಡಿಕೊಂಡಿದ್ದೆವು. ಹೀಗಾಗಿ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಆದರೆ ಮುಂದಿನ ಸಾರಿ ತೆರಳುವಾಗ ಯಾವುದೇ ಸದ್ದು ಮಾಡದೇ ಹೋಗುತ್ತೇವೆ. ಈ ವಿಚಾರವಾಗಿ ಪೊಲೀಸರು ನಮ್ಮ ಬೆಂಬಲಕ್ಕಿದ್ದಾರೆ ಎಂದರು.
ಅಯ್ಯಪ್ಪ ದರ್ಶನಕ್ಕಾಗಿ ಕೇರಳಕ್ಕೆ ತೆರಳಿದ್ದ ತೃಪ್ತಿ ದೇಸಾಯಿ, ಅಯ್ಯಪ್ಪ ಭಕ್ತರ ಪ್ರತಿಭಟನೆಯಿಂದಾಗಿ ದರ್ಶನ ಮಾಡದೇ ಕೊಚ್ಚಿ ವಿಮಾನ ನಿಲ್ದಾಣದಿಂದ ಪುಣೆಗೆ ವಾಪಸ್ ಆಗಿದ್ದರು. ಈ ಸಂದರ್ಭ ಮಾತನಾಡಿದ ತೃಪ್ತಿ ದೇಸಾಯಿ ನಾವು ಅಯ್ಯಪ್ಪನ ದರ್ಶನಕ್ಕೆ ಬರುತ್ತಿರುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿ ಕೇರಳಕ್ಕೆ ಹೋಗಿದ್ದರಿಂದ ನಮ್ಮ ವಿರುದ್ಧ ಪ್ರತಿಭಟನೆಗಳು ನಡೆದಿವೆ.ಆದರೆ ಮುಂದಿನ ಬಾರಿ ಹಾಗಾಗೋದಿಲ್ಲ. ಯಾವ ಸುಳಿವು ನೀಡದೇ ಗೆರಿಲ್ಲಾ ತಂತ್ರ ಬಳಸಿಕೊಂಡು ದರ್ಶನ ಮಾಡಿ ವಾಪಾಸ್ ಆಗುತ್ತೇವೆ ಎಂದು ಹೇಳಿದರು.
ನಾವು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅಲ್ಲಿ ಪ್ರತಿಭಟನಾಕಾರರು ರೌಡಿಗಳಂತೆ ಗೂಂಡಾಗಳಂತೆ ವರ್ತಿಸಿ ತಮ್ಮನ್ನು ಅಯ್ಯಪ್ಪನ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಈ ರೀತಿ ಕೆಟ್ಟದಾಗಿ ವರ್ತಿಸುವ, ಅಸಹ್ಯ ನಿಂದನೆ, ಬೆದರಿಕೆ ಹಾಕುತ್ತಿದ್ದ ನನಗೆ ಅವರ್ಯಾರು ಅಯ್ಯಪ್ಪನ ಭಕ್ತರಂತೆ ಕಾಣಲಿಲ್ಲ.ನಾವು ದರ್ಶನ ಪಡೆದೇ ಬರುತ್ತೇವೆ ಎಂಬ ಭಯದಿಂದ ಪ್ರತಿಭಟನಾಕಾರರು ನಮ್ಮನ್ನು ವಿಮಾನ ನಿಲ್ದಾಣದಿಂದ ಹೊರಹೋಗದಂತೆ ತಡೆದರು ಎಂದು ತಿಳಿಸಿದರು.