ಉಡುಪಿ, ನ 18 (MSP): ಇಬ್ಬರು ಮಕ್ಕಳನ್ನು ಅಪಹರಿಸಿ, ತಾಯಿ ಒಪ್ಪಿಗೆ ಇಲ್ಲದೆ ವಿದೇಶಕ್ಕೆ ಕರೆದೊಯ್ದ ತಂದೆ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ ದೂರು ನೀಡಲಾಗಿದೆ. ಸಚಿವಾಲಯ ಸ್ಪಂದಿಸದಿದ್ದರೆ ಸಮಸ್ಯೆ ಪರಿಹಾರಕ್ಕೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ್ ಶ್ಯಾನುಭಾಗ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಉಳ್ಳಾದ ರಿಶಾನಾ ನಿಲೋಫರ್ ಮಕ್ಕಳನ್ನು ಕಳೆದುಕೊಂಡವರು. ಈಕೆಯ ಪತಿ. ಸೆ.19 ರಂದು ಅಂಗಳದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ಹಾಗೂ 1 ವರ್ಷದ 3 ತಿಂಗಳ ಮಗುವನ್ನು ಕರೆದೊಯ್ದು ಅಂದು ರಾತ್ರಿ ಅಬುಧಾಬಿಗೆ ಮಕ್ಕಳ ಸಹಿತ ಪರಾರಿಯಾಗಿದ್ದಾರೆ. ಮೊದಮೊದಲು ಪತಿಯೊಂದಿಗೆ ದೂರವಾಣಿ ಸಂಪರ್ಕ ಸಿಗುತ್ತಿತ್ತು. ಈಗ ಸಿಗುತ್ತಿಲ್ಲ ಇದರಿಂದಾಗಿ ಮಾನಸಿಕ, ದೈಹಿಕ ಸಮತೋಲನ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದು, ಜೀವಕ್ಕೂ ಅಪಾಯವಿದೆ ಎಂದವರು ತಿಳಿಸಿದರು.
8 ವರ್ಷ ಹಿಂದೆ ಮಂಗಳೂರು ತೊಕ್ಕೊಟ್ಟು ಸಮೀಪ ಪೆರ್ಮನ್ನೂರು ನಿವಾಸಿ ರಿಶಾನಾ ನಿಲೋಫರ್ ಅವರ ವಿವಾಹ ಕುಂಬಳೆ ನಿವಾಸಿ ಮಹಮ್ಮದ್ ಶಾನಿಬ್ ಜತೆ 200 ಪವನ್ ಚಿನ್ನ ಹಾಗೂ ಪ್ಲ್ಯಾಟ್ ನೀಡಲಾಗಿತ್ತು. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಉದ್ಯೋಗದಲ್ಲಿ ಸ್ಥಿರತೆ ಇರಲಿಲ್ಲ ೩ ತಿಂಗಳ ವಿಸಿಟಿಂಗ್ ವೀಸಾದಲ್ಲಿ ಪತ್ನಿ ಹಾಗೂ ತಾಯಿಯನ್ನು ಕರೆಯಿಸಿಕೊಂಡಿದ್ದ. ಶಾನಿಬ್ ಹಾಗೂ ಆತನ ತಾಯಿ ರಿಶಾನಾ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಬಳಿಕ ಶಾನಿಬ್ ದುಬೈಗೆ ತೆರಳಿದ್ದು, ಪತ್ನಿಯ ಮೂರನೇ ಮಗುವಿನ ಹೆರಿಗೆ ವೇಳೆ ಸೆ.10ರಂದು ಊರಿಗೆ ಬಂದು ಸೆ.19ರಂದು 6 ಮತ್ತು 1.5 ವರ್ಷದ ಇಬ್ಬರು ಮಕ್ಕಳನ್ನು ಹೊರಗೆ ಸುತ್ತಾಡಿಸಿ ಐಸ್ ಕ್ರೀಂ ನೀಡುವ ನೆಪದಲ್ಲಿ 200 ಪವನ್ ಚಿನ್ನದೊಂದಿಗೆ ವಿದೇಶಕ್ಕೆ ತೆರಳಿದ್ದಾನೆ ಎಂದು ಸಂತ್ರಸ್ತ ಕುಟುಂಬದೊಂದಿಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.
ಮೊದಲು ಫೋನ್ ಮೂಲಕ ಸಂಪರ್ಕದಲ್ಲಿದ್ದ ಶಾನಿಬ್ ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಳೆಯ ಮಕ್ಕಳನ್ನು ಹೊರದೇಶಕ್ಕೆ ಸಾಗಿಸಿರುವುದು ಗಂಭೀರ ಅಪರಾಧ. ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ವೈಕುಂಠ ಬಾಳಿಗ ಕಾನೂನು ಕಾಲೇಜು ಪ್ರಾಂಶುಪಾಲ ಪ್ರಕಾಶ್ ಕಣಿವೆ, ಸಂತ್ರಸ್ತೆ ರಿಶಾನಾ ನಿಲೋಫರ್ ಮತ್ತು ಕುಟುಂಬ ಸದಸ್ಯರು, ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್ನ ಲತೀಫ್, ಸಲಾಹುದ್ದಿನ್ ಅಬ್ದುಲ್ಲಾ ಗೋಷ್ಠಿಯಲ್ಲಿದ್ದರು.
ಸಚಿವ ಖಾದರ್ ಸಂಬಂಧಿ: ಮಹಮ್ಮದ್ ಶನೀಬ್ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಂಬಂಧಿ ಎಂದು ತಿಳಿದು ಬಂದಿದೆ ಎಂದು ಪ್ರತಿಷ್ಠಾನ ವಕೀಲರಾದ ವಿಜಯಲಕ್ಷ್ಮಿ ತಿಳಿಸಿದರು. ಸಾಮಾಜಿಕ ಕಾರ್ಯಕರ್ತೆ ಮೆಹಬೂಬ ಮಾತನಾಡಿ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಉಳ್ಳಾಲ-ಪಾಂಡೇಶ್ವರ ಪೊಲೀಸ್ ಠಾಣೆ ಎಂದು ಅಲೆದಾಡಿಸಿದರು, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಮುಸ್ಲಿಂ ಸಂಘಟನೆ ಬೆಂಬಲ: ರಿಶಾನಾಗೆ ಮಹಿಳಾ ಮತ್ತು ಮುಸ್ಲಿಂ ಯುವ ಸಂಘಟನೆಗಳು ಬೆಂಬಲ ಸೂಚಿಸಿವೆ. ಉಡುಪಿ ಮುಸ್ಲಿಂ ಯುವಕರ ಸಂಘಟನೆ ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್ ಅವರು ಅಬುದಾಭಿ ಕನ್ನಡಿಗ ಸ್ನೇಹಿತರನ್ನು ಸಂಪರ್ಕಿಸಿ ಸೌಹಾರ್ದದಿಂದ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದಾರೆ. ಆದರೆ ಶನೀಬ್ ಮತ್ತು ಕುಟುಂಬ ನಮ್ಮ ಮನೆ ಸಮಸ್ಯೆಗೆ ನೀವು ತಲೆಹಾಕಬೇಡಿ ಎನ್ನುವ ಮೂಲಕ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರವಿಂದ್ರನಾಥ್ ಶ್ಯಾನುಭಾಗ್ ತಿಳಿಸಿದರು.