ಮಂಗಳೂರು, ನ. 02 (DaijiworldNews/SM): ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲನ ಪತ್ತೆಗಾಗಿ ನಾಲ್ಕು ತಂಡ ರಚಿಸಿದ್ದೇವೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಆರೋಪಿಯ ಬಗ್ಗೆ ಹಲವಾರು ಮಾಹಿತಿಗಳು ಲಭ್ಯವಾಗುತ್ತಿದೆ. ಮಾಹಿತಿಯ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಪವಿತ್ರಾ ಆಚಾರ್ಯ, ಬೊಂದೇಲ್ ನಿವಾಸಿ ಅನಂತ ಭಟ್ ಎಂಬವರನ್ನು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿ ತಲೆ ಮರೆಸಿಕೊಳ್ಳಲು, ಅನಂತ ಭಟ್ ಎಂಬವರು ತನಿಖೆಯ ದಿಕ್ಕು ತಪ್ಪಿಸಿದ್ದಾರೆ. ಪವಿತ್ರಾ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ನೆಪದಲ್ಲಿ ವಂಚಿಸಿದ್ದಾರೆ.
ಆರೋಪಿ ವಕೀಲ ರಾಜೇಶ್ ಭಟ್ ವಾಸ್ತವ್ಯದ ಮನೆ ಬದಲಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಹಲವಾರು ಕಡೆಗಳಲ್ಲಿ ಬದಲಿಸಿದ್ದಾರೆ. ಆರೋಪಿ ರಾಜೇಶ್ ಭಟ್ ಬೇಲ್’ಗಾಗಿ ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಬೇಲ್ ಮನವಿಯನ್ನು ತಿರಸ್ಕರಿಸಿದೆ. ಪ್ರಕರಣದ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.